ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ X ಪ್ಲಾಟ್ಫಾರ್ಮ್ನಲ್ಲಿ, ಕೇರಳದ ಒಂದು ವೈದ್ಯಕೀಯ ಕಾಲೇಜು ತನ್ನ ಎಲ್ಲಾ ಪ್ರಮುಖ ಕಾರ್ಯಕ್ರಮಗಳಿಗೆ ಮೊದಲು ಕುರಾನ್ ಓದುವುದನ್ನು ಕಡ್ಡಾಯಗೊಳಿಸಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಈ ಪೋಸ್ಟ್ಗಳು, ಕಾಲೇಜಿನ ಒಂದು ಪತ್ರದ ಚಿತ್ರವನ್ನು ಒಳಗೊಂಡಿದ್ದು, ಧಾರ್ಮಿಕ ಸಂವಿಧಾನಿಕತೆಯ ಬಗ್ಗೆ ಭಾರತದಲ್ಲಿ ಧರ್ಮನಿರಪೇಕ್ಷತೆ ಕುರಿತು ಚರ್ಚೆಗೆ ಕಾರಣವಾಗಿವೆ. ಈ ಸುದ್ದಿಯಿಂದ ಕೆಲವರು ಈ ನಿರ್ಧಾರವು ದೇಶದ ಏಕತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

ಈ ವೈರಲ್ ಪೋಸ್ಟ್ಗಳು ಜನರನ್ನು ದಾರಿತಪ್ಪಿಸುವ ಮೂಲಕ ಧಾರ್ಮಿಕ ಸಾಮರಸ್ಯವನ್ನು ಕದಡುವಂತೆ ಮಾಡಿದೆ. X ನಲ್ಲಿ ಕೆಲವು ಬಳಕೆದಾರರು ಈ ಪತ್ರವನ್ನು ಶೇರ್ ಮಾಡಿ ಇದು ಇತ್ತೀಚಿನ ಘಟನೆಯೆಂದು ಭಾವಿಸಿ, ಕೇರಳದ ಕಾಲೇಜುಗಳಲ್ಲಿ ಮುಸ್ಲಿಂ ಧಾರ್ಮಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂಬ ತಪ್ಪು ಗ್ರಹಿಕೆಯನ್ನು ಹರಡಿದ್ದಾರೆ. ಈ ಸುದ್ದಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವರು ಕೋಮು ದ್ವೇಷದ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ.
केरल के एक मेडिकल कॉलेज का आदेश …हर फंक्शन की शुरुआत कुरान के पाठ से होगी …अब इस देश मे धर्म निरपेक्षता खतरे में नही है pic.twitter.com/JWsKd41E6c
— 🇮🇳Jitendra pratap singh🇮🇳 (@jpsin1) May 30, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 2019 ರಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ಪೋಸ್ಟ್ ಅನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದು ವೈರಲ್ ಪೋಸ್ಟ್ನಲ್ಲಿರುವ ಸೂಚನಾ ಪತ್ರ ಇತ್ತೀಚಿನದಲ್ಲ ಎಂಬುದನ್ನು ನಮಗೆ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ, ಈ ಸುತ್ತೋಲೆ ಮತ್ತು ಅದರ ನಂತರದ ಪ್ರತಿಕ್ರಿಯೆಯ ಕುರಿತು ಟೈಮ್ಸ್ ಆಫ್ ಇಂಡಿಯಾ ಮೇ 1, 2019 ರಂದು ವಿವರವಾದ ವರದಿಯನ್ನು ಪ್ರಕಟಿಸಿದ್ದು ನಮಗೆ ಕಂಡು ಬಂದಿದೆ. ಇದರಲ್ಲಿ ನೋಟಿಸ್ ಹೊರಡಿಸಿದ ಕೇವಲ ಒಂದು ದಿನದ ನಂತರ, ಏಪ್ರಿಲ್ 19, 2019 ರಂದು ನೋಟಿಸ್ ಅನ್ನು ಹಿಂಪಡೆಯಲಾಯಿತು ಮತ್ತು ವಿವಾದದ ನಂತರ ಅದನ್ನು ಹೊರಡಿಸಿದ ವೈದ್ಯಕೀಯ ಅಧೀಕ್ಷಕರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ನಮಗೆ ಕಂಡು ಬಂದಿದೆ.

ವೈದ್ಯಕೀಯ ಮತ್ತು ಆರೋಗ್ಯ ಸುದ್ದಿ ವೇದಿಕೆಯಾದ ಮೆಡಿಕಲ್ ಡೈಲಾಗ್ಸ್ ಕೂಡ ಆ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ತನ್ನ ಲೇಖನದಲ್ಲಿ ಅದೇ ಮಾಹಿತಿಯನ್ನು ವರದಿ ಮಾಡಿದೆ. ಸುತ್ತೋಲೆಗೆ ಸಂಬಂಧಿಸಿದ ಸಮಸ್ಯೆಯನ್ನು ಇತರ ವೆಬ್ಸೈಟ್ಗಳು ಸಹ ವರದಿ ಮಾಡಿವೆ .

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ವೈದ್ಯಕಿಯ ಕಾಲೇಜೊಂದು ಇತ್ತೀಚೆಗೆ ತನ್ನ ಪ್ರಮುಖ ಕಾರ್ಯಕ್ರಮಗಳಿಗೆ ಮುನ್ನ ಕುರಾನ್ ಓದುವುದನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು, ವೈರಲ್ ಪೋಸ್ಟ್ 2019ರದ್ದಗಿದೆ. ಈ ಸೂಚನೆಯನ್ನು ಹೊರಡಿಸಿ ದೊಡ್ಡ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಸೂಚನೆಯನ್ನು ಮಾರನೆ ದಿನ ಹಿಂದಕ್ಕೆ ತೆಗೆದುಕೊಂಡಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಶ್ರೀರಾಮನ ಚಿತ್ರವಿರುವ ರೈಲಿನ ಫೋಟೋವನ್ನು AI ಬಳಸಿ ಸೃಷ್ಟಿಸಲಾಗಿದೆ

