ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗುತ್ತಿದೆ. ಒಂದೇ ಕುಟುಂಬದ ಮೂವರು ಸಹೋದರರು ಒಂದೇ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಮಹಿಳೆ ಮೂವರು ಪುರುಷರೊಂದಿಗೆ ಮದುವೆ ಆಗುತ್ತಿರುವ ರೀತಿ ಕಂಡು ಬಂದಿದೆ. ಹೀಗಾಗಿ ಇದನ್ನು ನಿಜವೆಂದು ಭಾವಿಸಿರುವ ಹಲವರು ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಇದಕ್ಕೆ ಕೋಮು ನಿರೂಪಣೆಯನ್ನು ನೀಡಿದ್ದು, ಹಿಂದೂ ಸಮುದಾಯದಲ್ಲಿ ಇದೊಂದು ಅಚ್ಚರಿಯ ಬೆಳವಣಿಗೆ, ಇದು ಅಂಧಭಕ್ತಿಯ ಫಲ ಎಂದೆಲ್ಲ ಬರೆದುಕೊಂಡು ಹಿಂದೂ ಸಮುದಾಯದಲ್ಲಿನ ಮೌಢ್ಯತೆ ಎಂದು ಬರೆದುಕೊಳ್ಳಲಾಗುತ್ತಿದೆ. ಹೀಗಾಗಿ ವಿಡಿಯೋ ಕೂಡ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹಿಂದೂ ಸಮುದಾಯದ ಬಗ್ಗೆ ತಪ್ಪು ಸಂದೇಶವನ್ನು ಹರಡಲಾಗುತ್ತಿದೆ. ಹೀಗಾಗಿ ಹೆಚ್ಚು ಶೇರ್ ಮಾಡಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ‘PM ಬಿಹಾರಿ ಕಾಮಿಡಿ’ ಎಂಬ ಹೆಸರಿನ YouTube ಖಾತೆಯಲ್ಲಿ ವೀಡಿಯೊದ ದೀರ್ಘ ಆವೃತ್ತಿ ಕಂಡು ಬಂದಿದೆ. ಈ ವೀಡಿಯೊವನ್ನು ಜೂನ್ 28, 2025 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.
ವೀಡಿಯೊದಲ್ಲಿ 12 ಸೆಕೆಂಡುಗಳಲ್ಲಿ ವೀಡಿಯೊದಲ್ಲಿ ಕಾಣುವವರೆಲ್ಲರೂ ಕಲಾವಿದರು ಎಂಬ ಮಾಹಿತಿ ಲಭ್ಯವಾಗಿದೆ. ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬುದು ಪರಿಶೀಲನೆ ನಡೆಸಿದಾಗ ತಿಳಿದು ಬಂದಿದೆ. ತನಿಖೆಯನ್ನು ಮತ್ತಷ್ಟು ಮುಂದುವರಿಸಿ, ನಾವು ಯೂಟ್ಯೂಬ್ ಚಾನೆಲ್ ಅನ್ನು ಹುಡುಕಿದಾಗ, ಚಾನೆಲ್ನ ವಿವರಣೆಯಲ್ಲಿ, ಸೃಷ್ಟಿಕರ್ತ ತನ್ನನ್ನು ‘ಬಿಹಾರಿ ಹಾಸ್ಯನಟ’ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಕಂಡು ಬಂದ ಕೆಲವರು ಬೇರೆ ಬೇರೆ ವಿಡಿಯೋಗಳಲ್ಲಿ ಕೂಡ ಕಂಡು ಬಂದಿದ್ದಾರೆ. ಹಾಗಾಗಿ ವೈರಲ್ ವಿಡಿಯೋ ತಪ್ಪು ಮಾಹಿತಿಯೊಂದಿಗೆ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ಮಹಿಳೆಯೊಬ್ಬರು ಮೂವರು ಸಹೋದರರೊಂದಿಗೆ ಮದುವೆಯಾಗಿದ್ದಾಳೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಕಿರುಚಿತ್ರದ ಭಾಗವಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಟ್ರಂಪ್ ಮೇಲೆ ಪ್ರತೀಕಾರದ ಸುಂಕ ಹೇರಲು ಬ್ರೆಜಿಲ್ ಅಧ್ಯಕ್ಷ ಲೂಲಾ ಅವರು ಬ್ರಿಕ್ಸ್ ದೇಶಗಳಿಗೆ ಮನವಿ ಮಾಡಿಲ್ಲ

