ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸತ್ತಿನ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮಂಗಳವಾರ ಲಕ್ನೋದ ವಿಶೇಷ ಸಂಸದ-ಶಾಸಕ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ, ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆಯಲು ಆದೇಶಿಸಿತು ಆದರೆ ಜಾಮೀನು ಅರ್ಜಿಯನ್ನು ಸ್ವೀಕರಿಸಿದ ನಂತರ ಅವರನ್ನು ಬಿಡುಗಡೆ ಮಾಡಿತು. ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯವರ ಹಾಜರಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ನ್ಯಾಯಾಧೀಶರು ಸ್ವತಃ ರಾಹುಲ್ ಗಾಂಧಿಯವರ ಅಭಿಮಾನಿಯಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಲವರು ಇದನ್ನು ನಿಜವೆಂದು ನಂಬಿ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಚಿತ್ರ ಎಂದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಪಡೆಯದೆ ಬಿಜೆಪಿ IT ಸೆಲ್ನ ಸಂಚಾಲಕರಾದ ಅಮಿತ್ ಮಾಳವಿಯ ಅವರು ಕೂಡ ಇದೇ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಹಲವು ಸುಳ್ಳು ಮಾಹಿತಿಯನ್ನು ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದ ಮಾಳವಿಯ ಅವರು ಈ ಬಾರಿಯೂ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಹೀಗೆ ಅಮಿತ್ ಮಾಳವಿಯ ಸೇರಿದಂತೆ ಹಲವರು ಹಂಚಿಕೊಂಡಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಫೋಟೊಗೆ ಸಂಬಂಧಿಸಿದಂತೆ ಎಬಿಪಿ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದು ಕಂಡು ಬಂದಿದೆ. ಅದರಲ್ಲಿ “ರಾಹುಲ್ ಗಾಂಧಿ ಅವರ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಅಲೋಕ್ ವರ್ಮಾ ಅವರ ಪೀಠದಲ್ಲಿ ನಡೆದಿತ್ತು, ವೈರಲ್ ಫೋಟೋದಲ್ಲಿರುವುದು ನ್ಯಾಯಾಧೀಶರಲ್ಲ ಬಾರಾಬಂಕಿ ಜಿಲ್ಲೆಯ ನಿವಾಸಿ ಹಾಗೂ ವಕೀಲ ಸೈಯದ್ ಮಹಮೂದ್ ಹಸನ್ ಎನ್ನಲಾಗಿದೆ. ಅವರು 2006 ರಿಂದ ಲಕ್ನೋ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಕುರಿತು NDTV ಕೂಡ ವರದಿಯನ್ನು ಮಾಡಿದ್ದು, ಈ ಸುದ್ದಿ ಸಂಸ್ದ ವೈರಲ್ ಆಗಿರುವ ಫೋಟೋ ಬಗ್ಗೆ ಸೈಯದ್ ಮಹಮೂದ್ ಹಸನ್ ಅವರನ್ನು ಸಂಪರ್ಕಿಸಿದ್ದು, ಈ ವೇಳೆ ಸೈಯದ್ ಮಹಮೂದ್ ಅವರು “ರಾಹುಲ್ ಗಾಂಧಿ ಅವರು ಕೋರ್ಟ್ಗೆ ಬಂದ ಸಮಯದಲ್ಲಿ ಸಮಯದಲ್ಲಿ ಅನೇಕ ವಕೀಲರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಆದ್ದರಿಂದ ನಾನು ಕೂಡ ಒಂದನ್ನು ತೆಗೆದುಕೊಂಡೆ” ಎಂದು ಹೆಳಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋದಲ್ಲಿ ಇರುವವರು ನ್ಯಾಯಾಧೀಶರಲ್ಲ ವಕೀಲರು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯವರ ಹಾಜರಾಗುವ ವೇಳೆ ನ್ಯಾಯಾಧೀಶರೊಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು. ಸೆಲ್ಫಿ ತೆಗೆದುಕೊಂಡವರು ವಕೀಲರಾಗಿದ್ದು, ಸುಳ್ಳು ಮಾಹಿತಿಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವೈರಲ್ ಫೋಟೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಬಾಂಗ್ಲಾದೇಶದಲ್ಲಿ ಕಲ್ಲುಗಳಿಂದ ಜಜ್ಜಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಸುಳ್ಳು

