“40ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಹಿಂದೂ ಶಿಕ್ಷಕನಿಗೆ ನಿವೃತ್ತಿಯ ದಿನ ಬಾಂಗ್ಲಾದೇಶದ ಮುಸ್ಲಿಮರು ನೀಡಿದ ಗೌರವ. ಕಾಫಿರನ ಸೇವೆಗೆ ನಾವು ಕೊಡುವ ಗೌರವ ಎಂದ ಮುಸ್ಲಿಂ ಸ್ಕಾಲರ್” ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿರುವುದು ಕಂಡುಬಂದಿದೆ.
ये एक हिंदू शिक्षक का बांग्लादेश में हाल है 40 साल तक वहाँ पढ़ाने के बाद वहाँ के इस्लामिक शासन में इनके साथ जो हो रहा है वो हर हिंदू के लिए तय है pic.twitter.com/Uxuo3VlWjb
— Riniti Chatterjee (@ChatterjAsking) June 27, 2025
ವೈರಲ್ ವಿಡಿಯೋವನ್ನು ನೋಡಿದ ಹಲವರು ಇದನ್ನು ನಿಜವೆಂದು ಭಾವಿಸಿ ʼಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕರಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಅಲ್ಲಿನ ಹಿಂದುಗಳು ಭಾರತಕ್ಕೆ ಬರುವುದೇ ಉತ್ತಮ, ಹಿಂದೂ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿದೆ ಆತನಿಗೆ ಚಪ್ಪಲಿ ಹಾರವನ್ನು ಹಾಕಿ ಅವಮಾನಿಸಿದ ಬಾಂಗ್ಲಾದ ಮುಸಲ್ಮಾನರು ತಮ್ಮ ಸಂಸ್ಕೃತಿ ಎಂತದ್ದು ಎಂಬುದನ್ನು ಸಾರಿದ್ದಾರೆ” ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ ನಲ್ಲಿ ಪರಿಶೀಲನೆ ನಡೆಸೋಣ


ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜೂನ್ 15ರಂದು ಡಾಕಾ ಟೈಮ್ಸ್ 24 ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ಈ ಘಟನೆ ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ಬಲಿಯಕಂಡಿ ಪ್ರದೇಶದಲ್ಲಿ ನಡೆದಿದೆ ಅಲ್ಲಿ ಅಹಮದ್ ಆಲಿ ಎಂಬ ನಿವೃತ್ತ ವೈದ್ಯಾಧಿಕಾರಿಯನ್ನು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಕೋಪಗೊಂಡ ಗುಂಪೊಂದು ಥಳಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಹಲ್ಲೆಗೊಳಗಾದ ವ್ಯಕ್ತಿ ಮುಸಲ್ಮಾನ ಎಂಬುದು ಖಚಿತವಾಗಿದೆ.


ಈ ಘಟನೆಯ ಹಿನ್ನೆಲೆಯ ಬಗ್ಗೆ ಪರಿಶೀಲನೆ ನಡೆಸಿದಾಗ ಅಲಿ ಅವರು ಚಹಾದ ಅಂಗಡಿಯಲ್ಲಿ ಕುಳಿತುಕೊಂಡು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪರ್ಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಸುತ್ತಮುತ್ತಲಿನ ಜನರು ಈ ಬಗ್ಗೆ ತಿಳಿದ ನಂತರದಲ್ಲಿ ಅಲಿಯನ್ನು ಸುತ್ತುವರೆದು ಥಳಿಸಿದರು. ಬಳಿಕ ಪೊಲೀಸರು ವೈದ್ಯಾಧಿಕಾರಿಯನ್ನು ರಕ್ಷಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನ ಹುಟ್ಟು ಹಾಕಿದ್ದು, ಬಾಂಗ್ಲಾದೇಶದ ಬರಹಗಾತಿ ತಸ್ಲೀಮಾ ನಸ್ರಿನ್ ಸೇರಿದಂತೆ ಅನೇಕರು ಡಾಕ್ಟರ್ ಅಹಮದ್ ಅಲಿ ಅವರ ಮೇಲಿನ ಹಲ್ಲೆ ಮತ್ತು ಅನುಚಿತ ವರ್ತನೆಯನ್ನು ಟೀಕಿಸಿರುವುದು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ, 40 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಹಿಂದೂ ಶಿಕ್ಷಕನನ್ನು ಬಾಂಗ್ಲಾದೇಶದ ಜನರು ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದ ವ್ಯಕ್ತಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಾಗಿದೆ. ಹಾಗಾಗಿ ಸುಳ್ಳು ಮಾಹಿತಿಯಿಂದ ಕೂಡಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ
ಇದನ್ನೂ ಓದಿ : Fact Check | ರಾಹುಲ್ ಗಾಂಧಿಯವರ ಹಳೆಯ ನೈಟ್ಕ್ಲಬ್ ವೀಡಿಯೊವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

