2022 ರಲ್ಲಿ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿದ ಉದಯಪುರ ಫೈಲ್ಸ್ ಎಂಬ ಹೆಸರಿನ ಚಲನಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತು ಆದರೆ ದೆಹಲಿ ಹೈಕೋರ್ಟ್ ಜುಲೈ 10, 2025 ರಂದು ಅದನ್ನು ತಡೆಹಿಡಿದಿದೆ. ಈ ಸಂದರ್ಭದಲ್ಲಿ, ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

ಉದಯಪುರ ಫೈಲ್ಸ್ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಇದನ್ನು ನಿಜವೆಂದು ಭಾವಿಸಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿ ವಿವಿಧ ಬರಹಗಳನ್ನು ಬರೆದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜುಲೈ 05, 2025 ರಂದು soyelsilencioso ಎಂಬ Instagram ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊ ಒಂದು ಕಂಡು ಬಂದಿದೆ. ಇದರಲ್ಲಿ ಕೊಲಂಬಿಯಾದ ನಜರೆತ್ನಲ್ಲಿ ಪೊಲೀಸರು ತಪ್ಪಾಗಿ ಗುಂಡು ಹಾರಿಸಿ ಯುಲ್ಬರ್ಟ್ ಬಾರ್ಬೋಜಾ ಅವರನ್ನು ಕೊಂದ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಹೆಚ್ಚುವರಿ ಹುಡುಕಾಟವು ಕೊಲಂಬಿಯಾದ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಬೇರೆ ಕೋನದಿಂದ ಅದೇ ಘಟನೆಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ವೈರಲ್ ದೃಶ್ಯಗಳು ವೀಡಿಯೊಗೆ ನಿಕಟವಾಗಿ ಹೊಂದಿಕೆಯಾಗುತ್ತವೆ. ವೀಡಿಯೊ ಶೀರ್ಷಿಕೆಯು ಈ ಘಟನೆ ಕೊಲಂಬಿಯಾದ ನಜರೆತ್ನಲ್ಲಿ ನಡೆದಿದೆ ಎಂದು ಖಚಿತಪಡಿಸಿದೆ.

ಘಟನೆಯ ಬಗ್ಗೆ ಆಳವಾದ ತನಿಖೆ ನಡೆಸಿದಾಗ ಕೊಲಂಬಿಯಾದ ಹಲವಾರು ಸ್ಥಳೀಯ ಮಾಧ್ಯಮಗಳಿಂದ ಬಂದ ವರದಿಗಳು ನಮಗೆ ದೊರೆತಿವೆ. ಈ ವರದಿಗಳ ಪ್ರಕಾರ ಜುಲೈ 04, 2025 ರಂದು, ಯುಲ್ಬರ್ಟ್ ಫೆರ್ನಾಂಡಿಸ್ ಬಾರ್ಬೋಸಾ ಅವರನ್ನು ಲಾ ಗುವಾಜಿರಾದ ನಜರೆತ್ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದರು. ಪೊಲೀಸ್ ಠಾಣೆಯ ಮೇಲೆ ಈ ಹಿಂದೆ ನಡೆದ ದಾಳಿಯಲ್ಲಿ ಬಳಸಲಾದ ವಾಹನ ಎಂದು ಅವರು ತಮ್ಮ ವಾಹನವನ್ನು ತಪ್ಪಾಗಿ ಭಾವಿಸಿದ್ದರು. ಅವರ ಸಾವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ನ್ಯಾಯಕ್ಕಾಗಿ ಒತ್ತಾಯಿಸಿದರು ಎಂದು ಈ ವರದಿಗಳಲ್ಲಿ ಉಲ್ಲೇಖವಾಗಿರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ. ಉದಯಪುರ್ ಫೈಲ್ಸ್ ಚಿತ್ರದ ಕಲಾವಿದರೊಬ್ಬರ ಮನೆಗೆ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಕೊಲೊಂಬಿಯಾಗೆ ಸಂಬಂಧಿಸಿದ್ದಾಗಿದೆ ಹಾಗಾಗಿ ವೈರಲ್ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಉತ್ತರ ಕನ್ನಡ ಪೊಲೀಸರು ವ್ಯಕ್ತಿಯೋರ್ವನಿಗೆ ಬೆಲ್ಟ್ನಿಂದ ಹೊಡೆದಿದ್ದಾರೆ ಎಂಬುದು ಸುಳ್ಳು

