ಭಾರತ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕುರಿತು ಪೋಸ್ಟ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ X ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.. ‘TheDailyCPEC’ ಖಾತೆಯ ಬಳಕೆದಾರರೊಬ್ಬರು “ಬ್ರೇಕಿಂಗ್: ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಡ್ರೋನ್ಗಳು ಭಾರತೀಯ ಭೂಪ್ರದೇಶದೊಳಗೆ 700 ಕಿ.ಮೀ. ಹಾರಿದವು ಎಂದು ಕೆಲವು ವರದಿಗಳು ಹೇಳುತ್ತಿದ್ದಾವೆ” ಎಂದು ಬರೆದುಕೊಡಿದ್ದಾರೆ.

ಇದೇ ರೀತಿಯ ಹಲವರು ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಕೆಲ ಪಾಕಿಸ್ತಾನಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಭಾರತದ ವಿರುದ್ಧ ಉದ್ದೇಶಪೂರ್ವಕವಾಗಿ ಈ ರೀತಿಯ ಆಧಾರ ರಹಿತ ಹಲವು ಸುದ್ದಿಗಳನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದನ್ನೇ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತದ ವಿರುದ್ಧ ವಿವಿಧ ರೀತಿಯ ನಕಾರಾತ್ಮಕ ಅಭಿಪ್ರಾಯವನ್ನು ಭಿತ್ತುವ ಕೆಲಸವನ್ನು ಪಾಕಿಸ್ತಾನ ಮಾಡಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಜುಲೈ 16, 2025 ರಂದು ಪ್ರಕಟವಾದ ದಿ ಎಕನಾಮಿಕ್ ಟೈಮ್ಸ್ನ ಒಂದು ವರದಿ ಕಂಡು ಬಂದಿದೆ. ಅದರಲ್ಲಿ “ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನ ತನ್ನ ಕೊಳಕು ತಂತ್ರಗಳಿಗೆ ಮರಳಿದೆ, ಪಂಜಾಬ್ನಲ್ಲಿ ಡ್ರೋನ್ ಮೂಲಕ ಡ್ರಗ್ ಡ್ರಾಪ್ಗಳನ್ನು ಪುನರಾರಂಭಿಸಿದೆ”. ಇತ್ತೀಚೆಗೆ, ಡ್ರೋನ್ಗಳು ಭಾರತದ ಗಡಿರೇಖೆಯನ್ನು ಸುಮಾರು 2 ರಿಂದ 2.5 ಕಿಲೋಮೀಟರ್ ವರೆಗೆ ಹಾರುವುದು ಕಂಡು ಬಂದಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಆದರೆ ಇದು ಆಪರೇಷನ್ ಸಿಂಧೂರ್ ನಂತರ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಇನ್ನು”ಪಾಕಿಸ್ತಾನದ ಡ್ರೋನ್ಗಳು ಭಾರತಕ್ಕೆ ಬಂದೂಕುಗಳು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಯತ್ನಿಸಿವೆ ” ಎಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲೂ ಕೂಡ ಪಾಕಿಸ್ತಾನಿ ಡ್ರೋನ್ಗಳು ವಾಸ್ತವವಾಗಿ 2 ಕಿ.ಮೀ ನಿಂದ 2.5 ಕಿ.ಮೀಗಿಂತ ಸ್ವಲ್ಪ ಹೆಚ್ಚು ಭಾರತದೊಳಗೆ ನುಸುಳಲು ಯತ್ನಿಸಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಆದರೆ ಇದು ಕೂಡ ಆಪರೇಷನ್ ಸಿಂಧೂರ್ ನಂತರದ ವರದಿಯಾಗಿರುವುದರಿಂದ ವೈರಲ್ ಪೋಸ್ಟ್ ಸುಳ್ಳಾಗಿದೆ. ಹಾಗೆಯೇ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಒಳಗೆ ಪಾಕ್ ಡ್ರೋನ್ಗಳು 300 ಕಿ.ಮೀ ಸಂಚರಿಸಿರುವ ಕುರಿತು ಯಾವುದೇ ವರದಿಗಳು ಮತ್ತು ಅಧಿಕೃತ ಮಾಹಿತಿಯು ಲಭ್ಯವಾಗಿಲ್ಲ. ಹಾಗಾಗಿ ವೈರಲ್ ಪೋಸ್ಟ್ ದಾರಿ ತಪ್ಪಿಸುವಂತಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಭಾರತದ ಭೂಪ್ರದೇಶದ ಒಳಗೆ ಪಾಕಿಸ್ತಾನದ ಡ್ರೋನ್ ಸುಮಾರು 700 ಕಿ.ಮೀ ವರೆಗೂ ಸಂಚರಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಆಗುತ್ತಿರುವ ಪೋಸ್ಟ್ ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಕೇವಲ ಸುಳ್ಳು ನಿರೂಪಣೆಯನ್ನು ಹೊಂದಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

