ಸಾಮಾಜಿಕ ಜಾಲತಾಣಗಳಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಭಾರತದ ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿದೆ ಎಂದು ಸಾಕಷ್ಟು ವಿದೇಶಿ ಖಾತೆಗಳು ವಿವಿಧ ಪೋಸ್ಟ್ಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತವೆ. ಹಲವರು ಇದನ್ನು ವಿವಿಧ ಕಡೆಗಳಲ್ಲಿ ಶೇರ್ ಮಾಡಿ ಭಾರತ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.

ಹೀಗೆ ಭಾರತಕ್ಕೆ ಅಪಮಾನ ಮಾಡಲು ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು “ಆಪರೇಷನ್ ಸಿಂಧೂರ್ ವೇಳೆ ನಾವು ಮೂರು ರಫೇಲ್ ಜೆಟ್ಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿರುವುದು ಕಂಡು ಬಂದಿದೆ. ವೈರಲ್ ವಿಡಿಯೋದಲ್ಲಿ ಎಸ್. ಜೈಶಂಕರ್ ಅವರು ಹೇಳಿರುವ ಹೇಳಿಕೆ ಸ್ಪಷ್ಟವಾಗಿರುವುದರಿಂದ ಹಲವರು ಇದನ್ನು ನಿಜವೆಂದು ಭಾವಿಸಿದ್ದಾರೆ. ಹೀಗಾಗಿ ವಿಡಿಯೋ ವೈರಲ್ ಆಗಿದ್ದು, ಹಲವು ವಿದೇಶಿಗರು ಇದನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/iamSaharEmami/status/1940774712990437777
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜುಲೈ 1 ರಂದು ಅಮೆರಿಕನ್ ಮಾಧ್ಯಮ ಸಂಸ್ಥೆ ನ್ಯೂಸ್ ವೀಕ್ ಪ್ರಕಟಿಸಿದ ಸಂದರ್ಶನದ ವಿಸ್ತೃತ ಆವೃತ್ತಿ ಕಂಡುಬಂದಿದೆ ಈ ವಿಡಿಯೋದ 43 ನಿಮಿಷ 5 ಸೆಕೆಂಡುಗಳಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ತುಣುಕು ಕಂಡು ಬಂದಿದೆ. ಇದರಲ್ಲಿ ಜೈಶಂಕರ್ ಅವರು “ಆ ರಾತ್ರಿ ಪಾಕಿಸ್ತಾನ ನಮ್ಮ ಮೇಲೆ ಬೃಹತ್ ದಾಳಿ ಮಾಡಿತ್ತು. ಅದರ ನಂತರ ನಾವು ಬಹಳ ಬೇಗನೆ ಪ್ರತಿಕ್ರಿಯಿಸಿದೆವು ಮತ್ತು ಮರುದಿನ ಬೆಳಗ್ಗೆ ಶ್ರೀ ರುಬಿಯೋ ನನಗೆ ಕರೆ ಮಾಡಿ ಪಾಕಿಸ್ತಾನ ಮಾತನಾಡಲು ಸಿದ್ಧವಾಗಿದೆ ಎಂದು ಹೇಳಿದರು” ಎಂದು ಹೇಳಿರುವುದು ಕಂಡುಬಂದಿದೆ. ಆದರೆ ಇದರಲ್ಲಿ ಎಲ್ಲಿಯೂ ಎಸ್. ಜೈಶಂಕರ್ ಅವರು ಭಾರತ ಮೂರು ರಫೇಲ್ ಜೆಟ್ಗಳು ಕಳೆದುಕೊಂಡಿದೆ ಎಂದು ಹೇಳಿರುವುದು ಕಂಡುಬಂದಿಲ್ಲ.
ಇನ್ನು ಎಸ್. ಜೈಶಂಕರ್ ಅವರು ಭಾರತದ ರಫೇಲ್ ಕುರಿತು ಯಾವುದಾದರೂ ಹೇಳಿಕೆಗಳನ್ನು ನೀಡಿದ್ದಾರೆಯೆ ಎಂದು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ವಿವಿಧ ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು. ಆದರೆ ವೈರಲ್ ವಿಡಿಯೋದಲ್ಲಿ ಹಂಚಿಕೊಂಡಂತೆ ಎಸ್.ಜೈಶಂಕರ್ ಅವರು ಎಲ್ಲಿಯೂ ಕೂಡ ಭಾರತ ತನ್ನ ಮೂರು ರಫೇಲ್ ಜೆಟ್ಗಳನ್ನು ಕಳೆದುಕೊಂಡಿದೆ ಎಂದು ಹೇಳಿಕೆಯನ್ನು ನೀಡಿರುವ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ಹಲವು ಅಂತರರಾಷ್ಟ್ರೀಯ, ರಾಷ್ಟ್ರೀಯ, ಸ್ಥಳೀಯ ಸುದ್ದಿ ಮಾಧ್ಯಮಗಳು ಕೂಡ ವರದಿಯನ್ನು ಮಾಡುತ್ತಿದ್ದವು. ಹಾಗಾಗಿ ವೈರಲ್ ವಿಡಿಯೋ ಎಡಿಟ್ ಮಾಡಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತ ಆಪರೇಷನ್ ಸಿಂಧೂರ ಸಮಯದಲ್ಲಿ ತನ್ನ ಮೂರು ರಫೆಲ್ ಜೆಟ್ಗಳನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಶೇರ್ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ‘ಸಿತಾರೆ ಜಮೀನ್ ಪರ್’ ಗಳಿಕೆಯ ಶೇ.50 ರಷ್ಟು ಹಣ ಗಾಜಾ ಸಂತ್ರಸ್ತರಿಗೆ ಕೊಡುವುದಾಗಿ ಅಮಿರ್ ಖಾನ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

