ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಈಗಾಗಲೇ ಹಲವು ವರದಿಗಳು ಈ ಬಗ್ಗೆ ಬಂದಿವೆ. ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರವಾಹದ ನೀರಿನಲ್ಲಿ ವಿಮಾನಗಳು ಸಿಲುಕಿರುವ ದೃಶ್ಯವನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ, ಮತ್ತು ಇದು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಎಂದು ಹೇಳಿಕೊಳ್ಳಲಾಗುತ್ತಿದೆ.

ಹಲವರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದು, ದೆಹಲಿ ಸರ್ಕಾರವನ್ನು ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡಲಾಗುತ್ತಿದೆ. ಇನ್ನು ಕೆಲವರು ಈ ವಿಡಿಯೋವನ್ನು ಹಂಚಿಕೊಂಡು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೆಹಲಿ ವಿಮಾನ ನಿಲ್ದಾಣ ಈ ರೀತಿಯ ಪ್ರವಾಹ ಸ್ಥಿತಿಯನ್ನು ಎದುರಿಸಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮಾಹಿತಿಯೊಂದು ಕಂಡು ಬಂದಿದೆ. ಅವುಗಳ ಪ್ರಕಾರ ಈ ಘಟನೆಯು ಏಪ್ರಿಲ್ 16, 2024 ರಂದು ದುಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
🚨The #UAE is hit by rare heavy #rainstorms this morning: vehicles are submerged & planes struggle to navigate through water in #Dubai Airport. Heavy rainfall creates massive ponds on streets and airport runways across the UAE🌧✈ pic.twitter.com/ixp8fb0oVg
— iChongqing (@iChongqing_CIMC) April 17, 2024
ಇದರ ಆಧಾರದ ಮೇಲೆ ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹಲವಾರು ವರದಿಗಳು ಕಂಡು ಬಂದವು. ಈ ವರದಿಗಳ ಪ್ರಕಾರ ಏಪ್ರಿಲ್ 2024 ರಲ್ಲಿ, ದಾಖಲೆಯ ಮಳೆ ಮತ್ತು ತೀವ್ರ ಪ್ರವಾಹದಿಂದಾಗಿ ಭಾರತ ಮತ್ತು ದುಬೈ ನಡುವಿನ 30 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಯಿತು. ರನ್ವೇಗಳು ನೀರಿನಿಂದ ತುಂಬಿರುವುದರಿಂದ ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ತಪ್ಪಿಸುವಂತೆ ದುಬೈ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸೂಚಿಸಿತ್ತು. ಇಂಡಿಗೋ, ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇತರ ವಿಮಾನಯಾನ ಸಂಸ್ಥೆಗಳು ಪ್ರಮುಖ ಅಡಚಣೆಗಳನ್ನು ಎದುರಿಸಿದವು, ಪ್ರಯಾಣಿಕರಿಗೆ ಮರುಪಾವತಿ ಅಥವಾ ಮರು ವೇಳಾಪಟ್ಟಿಯನ್ನು ನೀಡಲಾಯಿತು. ಯುಎಇ 75 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು ಕಂಡಿತು, ಇದು ವಿಮಾನ ಪ್ರಯಾಣ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿತು. ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇತ್ತೀಚೆಗೆ ದೆಹಲಿಯಲ್ಲಿ ಮಳೆಯಿಂದಾಗಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸಾಭೀತಾಗಿದೆ. ವೈರಲ್ ವಿಡಿಯೋ 2024ರ ದುಬೈ ಪ್ರವಾಹಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಸ್ಪೆನ್ ನಾಗರಿಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

