ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಲಕ್ನೋ ಪೊಲೀಸರು ಮಲಿಹಾಬಾದ್ನಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕವನ್ನು ಪತ್ತೆಹಚ್ಚಿ, ಹಕೀಮ್ ಸಲಾವುದ್ದೀನ್ ಅಲಿಯಾಸ್ ಲಾಲಾ ಎಂಬಾತನನ್ನು ಬಂದೂಕುಗಳು, ಮದ್ದುಗುಂಡುಗಳು ಮತ್ತು ಸಂರಕ್ಷಿತ ಜಿಂಕೆಯ ಚರ್ಮದೊಂದಿಗೆ ಸಾಕ್ಷಿ ಸಮೇತ ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಸಾಕಷ್ಟು ಬಂದೂಕುಗಳು ಮತ್ತು ಹಣ ಇರುವುದು ಕಂಡು ಬಂದಿದ್ದು, ಇದನ್ನು ಹಕೀಮ್ ಸಲಾಹುದ್ದೀನ್ ಮನೆಯಿಂದ 3,000 ಕ್ಕೂ ಹೆಚ್ಚು ಬಂದೂಕುಗಳು ಪತ್ತೆಯಾಗಿವೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವೈಯಕ್ತಿಕ ಖಾತೆಯಲ್ಲಿ ‘‘ಲಕ್ನೋದ ಹಕೀಮ್ ಸಲಾವುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 20 ಚೀಲಗಳಲ್ಲಿ 50,000 ಕಾರ್ಟ್ರಿಡ್ಜ್ಗಳು ಮತ್ತು $ 1,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಏನೆಲ್ಲಾ ಸಮಾಜದಲ್ಲಿ ದುಷ್ಕೃತ್ಯಗಳನ್ನು ಮಾಡಲು ಇವನ್ನು ಇವರುಗಳು ತಂದು ಇಟ್ಟುಕೊಂಡಿದ್ದರು. ಮತ್ತು ಈ ದೇಶದಲ್ಲಿ ಇಷ್ಟು ಸುಲಭವಾಗಿ ಶಸ್ತ್ರಾಸ್ತ್ರಗಗಳು ಸಿಗುತ್ತವೆ ಎಂದರೆ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ತಿಳಿಯಿರಿ’’ ಎಂದು ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ 2021ರ ಆಗಸ್ಟ್ ತಿಂಗಳಿನಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗೆ ಹೋಲಿಕೆಯಾಗುವ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿರುವುದು ಕಂಡು ಬಂದಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಅಮೆರಿಕಕ್ಕೆ ಸೇರಿದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
tons of #US weapons seized by #Taliban pic.twitter.com/XZUxfbSh3I
— C4H10FO2P ☠️ (@markito0171) August 16, 2021
ಈ ಮಾಹಿತಿಯ ಆಧಾರದ ಮೇಲೆ ನಾವು ವಿವಿಧ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು, ಈ ವೇಳೆ ನಮಗೆ ಎಬಿಪಿ ನ್ಯೂಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ಈ ವೀಡಿಯೊವನ್ನು ಆಗಸ್ಟ್ 30, 2021 ರಂದು ಹಂಚಿಕೊಳ್ಳಲಾಗಿದೆ. ಇದರಲ್ಲಿ ವೈರಲ್ ವೀಡಿಯೊದ ಕ್ಲಿಪ್ ಕೂಡ ಇದೆ. ಇದರಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಈ ವೀಡಿಯೊ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಯುಎಸ್ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ 20 ಆಗಸ್ಟ್ 2021 ರ ವಿಯಾನ್ ಎಂಬ ಯೂಟ್ಯಬ್ ಮಾಧ್ಯಮದಲ್ಲಿ ಕೂಡ ವರದಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಕೂಡ ವೈರಲ್ ವೀಡಿಯೊದಲ್ಲಿರುವ ದೃಶ್ಯ ಬೇರೆ ಆಯಾಮದಲ್ಲಿ ಇರುವುದು ಕಂಡು ಬಂದಿದೆ. ಇದರಲ್ಲಿ “ಅಫ್ಘಾನಿಸ್ತಾನದ ಪಡೆಗಳ ಹಿನಾಯ ಸೋಲಿನ ನಂತರ ಯುಎಸ್ ಆರ್ಮಗೆ ಸೇರಿದ ಬೃಹತ್ ಪ್ರಮಾಣದ ಆಯುಧವನ್ನು ಇದೀಗ ತಾಲಿಬಾನ್ ವಶ ಪಡಿಸಿಕೊಂಡಿದೆ ” ಎಂಬ ಮಾಹಿತಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ವೈರಲ್ ವಿಡಿಯೋ ಹಳೆಯದು ಮತ್ತು ಹಕೀಮ್ ಸಲಾವುದ್ದೀನ್ ಪ್ರಕರಣಕ್ಕೂ ವೈರಲ್ ವಿಡಿಯೋಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಕೀಮ್ ಸಲಾವುದ್ದೀನ್ ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾದ ಆಯುಧಗಳ ವಿಡಿಯೋ ಎಂಬುದು ನಿಜವಾದ ವಿಡಿಯೋ ಅಲ್ಲ. ಇದರು 2021ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಇದೆ. ವೈರಲ್ ವಿಡಿಯೋ ಮೂಲತಃ ತಾಲಿಬಾನಿಗಳು ಅಮೆರಿಕದ ಆಯುಧಗಳನ್ನು ವಶ ಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

