ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಇದು ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಕೇಬಿನ್ ಒಳಗಿನ ದೃಶ್ಯ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ವಿಮಾನದ ಕೇಬಿನ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿರುವಂತೆ ತೋರಿಸಲಾಗಿದೆ. ಈ ವಿಡಿಯೋವನ್ನು “ಅಹಮದಾಬಾದ್ ವಿಮಾನ ದುರಂತದ ಕೊನೆಯ ಕ್ಷಣಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ಇದನ್ನು ನಂಬಿ ಶೇರ್ ಮಾಡಿದ್ದಾರೆ.

ಈ ವೈರಲ್ ವಿಡಿಯೋ ಜನಸಾಮಾನ್ಯರಲ್ಲಿ ಭಾವನಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಈ ದೃಶ್ಯಗಳನ್ನು ದುರಂತದ ನೈಜ ಕ್ಷಣಗಳೆಂದು ಭಾವಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ, ದುಃಖ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಆಧರಿಸಿ ವಿಮಾನದೊಳಗೆ ಹೊಗೆಯಿಂದ ದುರಂತ ಸಂಭವಿಸಿತು ಎಂಬ ತಪ್ಪು ತೀರ್ಮಾನಕ್ಕೆ ಬಂದಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮಾರ್ಚ್ 17, 2023 ರಂದು ಪೋಲಿಷ್ ಸುದ್ದಿ ವೆಬ್ಸೈಟ್ ವಿಯಾಡೋಮೊಸ್ಸಿ ಡಾಟ್ ಡಬ್ಲ್ಯೂಪಿಯಲ್ಲಿ ಅಪ್ಲೋಡ್ ಮಾಡಲಾದ ವೈರಲ್ ವಿಡಿಯೋಗೆ ಹೋಲಿಕೆಯಾಗುವ ವಿಡಿಯೋ ಕಂಡು ಬಂದಿದೆ. ಇದರಲ್ಲಿ ಈ ಘಟನೆ ರೊಮೆನಿಯಾದಲ್ಲಿ ನಡೆದಿದೆ ಎಂದು ವಿವಿರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜನವರಿ 2020 ರ ಹಲವಾರು ಸುದ್ದಿ ವರದಿಗಳು ನಮಗೆ ಕಂಡುಬಂದವು, ಅವು ರೊಮೇನಿಯಾದ ರಯಾನ್ಏರ್ ವಿಮಾನದಲ್ಲಿ ನಡೆದ ಘಟನೆಯನ್ನು ವಿವರಿಸುತ್ತವೆ ಮತ್ತು ವೈರಲ್ ವೀಡಿಯೊಗೆ ಹೋಲುವ ಕ್ಲಿಪ್ಗಳನ್ನು ಎಂಬೆಡ್ ಮಾಡಿರುವುದು ಕಂಡು ಬಂದಿದೆ. ಜನವರಿ 23, 2020 ರ NDTVವರದಿಯ ಪ್ರಕಾರ , “ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ಲಂಡನ್ಗೆ ಹೋಗುವ ವಿಮಾನವು ಇದ್ದಕ್ಕಿದ್ದಂತೆ ಹೊಗೆಯಿಂದ ತುಂಬಿ ಜನರು ಭಯಭೀತರಾಗಿದ್ದರು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ಇನ್ನೂ ಹಲವು ವರದಿಗಳು ಕಂಡು ಬಂದಿವೆ.

ಒಟ್ಟಾರೆಯಾಗಿ ಹೇಳುವುದಾದರೆ ವಿಮಾನದ ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡ ವಿಡಿಯೋ ಅಹಮದಾಬಾದ್ನಲ್ಲಿ ದುರಂತಕ್ಕೆ ಒಳಗಾದ ವಿಮಾನದಲ್ಲಿ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ರೊಮೇನಿಯಾದಲ್ಲಿ ನಡೆದ ಘಟನೆಯಾಗಿದ್ದು, ರಯಾನ್ಏರ್ ವಿಮಾನವು ಹೊಗೆಯಿಂದ ತುಂಬಿರುವುದಕ್ಕೆ ಸಂಬಂಧಿಸಿದ್ದಾಗಿ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಹಿಂದೂ ಸಂತನೊಬ್ಬ ಮೊಸಳೆಯ ಮೇಲೆ ಸವಾರಿ ಮಾಡುವ ವಿಡಿಯೋ AI ನಿಂದ ನಿರ್ಮಿಸಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

