ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೇರಳದ ಪಿಟೀಲು ವಾದಕರೊಬ್ಬರು ತಮ್ಮ ಕಾರ್ಯಕ್ರಮದ ಪ್ರದರ್ಶನವನ್ನು ನೀಡುತ್ತಿದ್ದಾಗ ಅಲ್ಲಿಗೆ ಕೆಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಬಂದು ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ ಎಂದು ವಿಡಿಯೋದೊಂದಿಗೆ ಬರೆದುಕೊಂಡು ಪೋಸ್ಟ್ ಮಾಡಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ( ಆರ್ಕೈವ್ ಲಿಂಕ್) ಕೂಡ ವಾದಕಿ ಮಧ್ಯದಲ್ಲೇ ತಮ್ಮ ಕಾರ್ಯಕ್ರಮವನ್ನು ಮೋಟುಕುಗೊಳಿಸುವುದು ಕಂಡುಬಂದಿದೆ.

ವಿಡಿಯೋ ನೋಡಿದ ಹಲವು ಮಂದಿ ವೈರಲ್ ಪೋಸ್ಟ್ನಲ್ಲಿ ಉಲ್ಲೇಖಿಸಿದ ಅಂಶವನ್ನು ನಿಜವಿಂದು ಭಾವಿಸಿ, ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದು, ಹಲವರು ಸಂಗೀತ ಕಲೆಯ ಬಗ್ಗೆ ಇಡಿ ಸಮುದಾಯ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ಕೋಮು ದ್ವೇಷವನ್ನು ಹರಡಲು ಕಾರಣವಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಹಂಚಿಕೊಳ್ಳಲಾದ ಹಲವು ವರದಿಗಳು ಕಂಡುಬಂದಿವೆ. ಈ ವರದಿಗಳಲ್ಲಿ ಉಲ್ಲೇಖಿಸಿರುವಂತೆ ಈ ಘಟನೆ ಕೋಮು ಆಯಾಮದ ಕಾರಣಕ್ಕಾಗಿ ನಡೆದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ.

ಈ ವರದಿಗಳ ಪ್ರಕಾರ ಕೇರಳದ ಆಲಪ್ಪುಳ್ಳ ಪೊಲೀಸರು 12 ವರ್ಷದ ಪಿಟೀಲು ವಾದಕಿ ಗಂಗಾ ಶಶಿಧರ್ ಅವರ ಪ್ರದರ್ಶನವನ್ನು ನಿಲ್ಲಿಸುವಂತೆ ಆಯೋಜಕರಲ್ಲಿ ಕೇಳಿಕೊಂಡಿದ್ದರು, ಈ ಹಿನ್ನೆಲೆಯಲ್ಲಿ ಆಯೋಜಕರು ಪ್ರದರ್ಶನವನ್ನು ನಿಲ್ಲಿಸಿದ್ದಾರೆ. ಅಸಲಿಗೆ ಪ್ರದರ್ಶನಕ್ಕಾಗಿ ನಿಗದಿತ ಸಮಯವನ್ನು ನೀಡಲಾಗಿತ್ತು. ಆದರೆ ಸಮಯ ಮೀರಿ ಕಾರ್ಯಕ್ರಮ ನಡೆದಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನು ಮೋಟಕುಗೊಳಿಸಿದರು ಎಂದು ಉಲ್ಲೇಖಿಸಲಾಗಿದೆ. ಪೊಲೀಸರ ಪ್ರಕಾರ ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಲಾಗಿತ್ತು, ಆದರೆ ಹತ್ತು ಗಂಟೆಯ ಅವಧಿಯನ್ನು ಮೀರಿಯೂ ಕಾರ್ಯಕ್ರಮ ಪ್ರದರ್ಶಿಸಿದ್ದರಿಂದ ಕಾನೂನಿನ ಪ್ರಕಾರ ಕಾರ್ಯಕ್ರಮವನ್ನು ಮೋಟಕುಗೊಳಿಸಲಾಗಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಕೇರಳದಲ್ಲಿ ನಡೆಯುತ್ತಿದ್ದ ಪೀಟೀಲು ವಾದ್ಯ ಕಾರ್ಯಕ್ರಮದ ಪ್ರದರ್ಶನವನ್ನು ಮುಸ್ಲಿಂ ಸಮುದಾಯದ ಹಲವು ವ್ಯಕ್ತಿಗಳು ಕಾರಣವಿಲ್ಲದೆ ನಿಲ್ಲಿಸಿದ್ದಾರೆ ಎಂಬುದು ಸುಳ್ಳಾಗಿದೆ. ಕಾರ್ಯಕ್ರಮವನ್ನು ನಿಲ್ಲಿಸಿದ್ದು ಪೊಲೀಸರಾಗಿದ್ದು, ಸಮಯದ ಮಿತಿ ಮೀರಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಮಾಹಿತಿಯಿಂದ ಕೂಡಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | 1884 ರಲ್ಲಿ ಈಡನ್ ಗಾರ್ಡನ್ನಲ್ಲಿ ಸ್ವಾಮಿ ವಿವೇಕಾನಂದರು ಬೌಲಿಂಗ್ ಮಾಡಿದ್ದರು ಎಂಬುದು ಸುಳ್ಳು

