ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯದಲ್ಲಿ ಇಸ್ರೇಲ್ ಸೈನಿಕನೊಬ್ಬ ಇರಾನ್ ಬಳಿ ಕ್ಷಮೆ ಯಾಚಿಸುತ್ತಿರುವುದಾಗಿಯೂ ಮತ್ತು ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತಿರುವುದಾಗಿಯೂ ತೋರಿಸುತ್ತದೆ. ಈ ವಿಡಿಯೋವನ್ನು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಸಂದರ್ಭದಲ್ಲಿ ನಿಜವಾದ ಘಟನೆಯೆಂದು ಚಿತ್ರಿಸಲಾಗಿದ್ದು, ಇದು ಜನರಲ್ಲಿ ಗೊಂದಲ ಮತ್ತು ತಪ್ಪು ಗ್ರಹಿಕೆಯನ್ನು ಹುಟ್ಟುಹಾಕಿದೆ. ಹೀಗಾಗಿ ಈ ವಿಡಿಯೋವನ್ನು ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಇಸ್ರೇಲ್ ಸೈನಿಕರ ದೌರ್ಬಲ್ಯದ ಸಂಕೇತವೆಂದು ಭಾವಿಸಿದರೆ, ಇನ್ನು ಕೆಲವರು ಇದು ಇರಾನ್ನ ಶಕ್ತಿಯ ಸೂಚಕವೆಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಈ ವಿಡಿಯೋ ಜನರನ್ನು ದಾರಿತಪ್ಪಿಸಿ, ಎರಡು ರಾಷ್ಟ್ರಗಳ ನಡುವಿನ ಸಂಘರ್ಷದ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಮೊದಲು ನಾವು ವೈರಲ್ ವಿಡಿಯೋವಿನ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ಈ ಕುರಿತು ಯಾವುದೇ ಮಾಹಿತಿ ದೊರಕಲಿಲ್ಲ. ಹೀಗಾಗಿ ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಇಸ್ರೇಲ್ ಸೈನಿಕ ಇರಾನ್ ಬಳಿ ಕ್ಷಮೆ ಕೇಳಿದ್ದಾನೆಯೇ ಎಂದು ವಿವಿಧ ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು. ಒಂದು ವೇಳೆ ವೈರಲ್ ಇಸ್ರೇಲ್ನ ಸೈನಿಕ ಕ್ಷಮೆ ಕೇಳಿದ್ದು ನಿಜವಾಗಿದ್ದರೆ ಆ ಕುರಿತು ಅಂತರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು ಆದರೆ ಆ ರೀತಿಯಾದ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ಹೀಗಾಗಿ ವೈರಲ್ ವಿಡಿಯೋ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಈ ಹಿನ್ನೆಲೆಯಲ್ಲಿ ಮೊದಲು ನಾವು ವೈರಲ್ ವಿಡಿಯೋ AI ನಿಂದ ನಿರ್ಮಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಿದೆವು. ಇದಕ್ಕಾಗಿ ವೈರಲ್ ವಿಡಿಯೋವನ್ನು AI ವಿಡಿಯೋ ಮತ್ತು ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ತಾಣವಾದ ಹೈವ್ ಮಾಡರೇಷನ್ನಲ್ಲಿ ಪರಿಶೀಲಿಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋವನ್ನು ಶೇ.99 ರಷ್ಟು AI ನಿಂದ ನಿರ್ಮಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವಿಡಿಯೋದಲ್ಲಿ ಹೇಳಲಾದಂತೆ ಇಸ್ರೇಲ್ನ ಸೈನಿಕನೊಬ್ಬ ಇರಾನ್ ಬಳಿ ಕ್ಷಮೆ ಯಾಚಿಸಿದ್ದಾನೆ ಮತ್ತು ಯುದ್ಧ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾನೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ AI ನಿಂದ ನಿರ್ಮಿಸಲಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ ವ್ಯಕ್ತಿಗೆ ಭಾರತೀಯ ಸೇನಾಧಿಕಾರಿ ಹೊಡೆದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

