ಭಾರತ ಸರ್ಕಾರವು ಇತ್ತೀಚೆಗೆ ‘ಸ್ವಚ್ಛ ಸರ್ವೇಕ್ಷಣ್ 2024-25’ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಇಂದೋರ್ ನಗರವು ಮತ್ತೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಭಾಜನವಾಗಿದೆ. ಈ ಸುದ್ದಿಯ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ರಸ್ತೆಯ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಟ್ಯಾಂಕರ್ನಿಂದ ನೀರು ಸಿಂಪಡಿಸುವ ದೃಶ್ಯ ಕಾಣಿಸುತ್ತದೆ. ಈ ಘಟನೆ ಇಂದೋರ್ನಲ್ಲಿ ನಡೆದಿದೆ ಎಂಬ ಆರೋಪದೊಂದಿಗೆ ಹಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ಹಲವರು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಭಾರತದ ಎಲ್ಲೆಡೆ ಈ ಕಾನೂನು ಜಾರಿ ಮಾಡಬೇಕು. ಎಲ್ಲೆಲ್ಲಿ ಈ ರೀತಿ ಮೂತ್ರ ವಿಸರ್ಜನೆ ಮಾಡುತ್ತಾರೋ ಅವರಿಗೆ ಇದೊಂದು ಪಾಠವಾಗಬೇಕು ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಪತ್ತೆ ಹಚ್ಚಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ. ಮಾರ್ಚ್ 16, 2025 ರಂದು ದಕ್ಷಿಣ ಅಮೆರಿಕಾದ ದೇಶವಾದ ಪೆರುವಿನ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ ಅದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಜೊತೆಗಿನ ಶೀರ್ಷಿಕೆಯು ಅದು ಪೆರುವಿನ ಲಾ ವಿಕ್ಟೋರಿಯಾದ ವಿಡಿಯೋ ಎಂಬುದು ನಮಗೆ ಖಚಿತವಾಗಿದೆ.

ಫೇಸ್ಬುಕ್ನಲ್ಲಿ ಹರಡಿರುವ ವೈರಲ್ ವಿಡಿಯೋದ ಶೀರ್ಷಿಕೆಯ ಸ್ಪ್ಯಾನಿಷ್ ಭಾಷೆಯ ಮಾಹಿತಿಯನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ, ಮಾರ್ಚ್ 15, 2025 ರಂದು ಲಾ ರಿಪಬ್ಲಿಕಾ ಎಂಬ ಸುದ್ದಿ ವೆಬ್ಸೈಟ್ನಲ್ಲಿ ಪ್ರಕಟಗೊಂಡ ವರದಿಯೊಂದು ಕಂಡುಬಂದಿತು. ಈ ವರದಿಯಲ್ಲಿ ವೈರಲ್ ವಿಡಿಯೋದ ದೃಶ್ಯಗಳಿದ್ದವು. ವರದಿಯ ಪ್ರಕಾರ, “ಪೆರುವಿನ ರಸ್ತೆಯೊಂದರ ಬದಿಯಲ್ಲಿ ಒಬ್ಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ, ಆ ದಾರಿಯಲ್ಲಿ ನೀರಿನ ಟ್ಯಾಂಕರ್ ಹಾದುಹೋಗಿತ್ತು. ಟ್ಯಾಂಕರ್ನಲ್ಲಿದ್ದ ಜನರು ಈ ವ್ಯಕ್ತಿಯನ್ನು ಗಮನಿಸಿ, ಅವನ ಮೇಲೆ ಪೈಪ್ನಿಂದ ನೀರು ಸಿಂಪಡಿಸಲು ಶುರುಮಾಡಿದರು. ಇದರಿಂದ ಆ ವ್ಯಕ್ತಿ ಓಡಲು ಪ್ರಯತ್ನಿಸಿದರೂ, ಟ್ಯಾಂಕರ್ನಲ್ಲಿದ್ದವರು ನೀರು ಸುರಿಯುವುದನ್ನು ಮುಂದುವರೆಸಿ, ಅವನನ್ನು ಸಂಪೂರ್ಣವಾಗಿ ನೆನೆಯುವಂತೆ ಮಾಡಿದರು.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ, ಇಂಧೋರ್ನಲ್ಲಿ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಗೆ ಟ್ಯಾಂಕರ್ ಮೂಲಕ ನೀರು ಸಿಂಪಡಿಸಿ ಆತನನ್ನು ಸಂಪೂರ್ಣವಾಗಿ ನೆನೆಸಲಾಯಿತು ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಪೆರುಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಚಂದ್ರಶೇಖರ್ ಅಜಾದ್ ಜೈಲಿನಲ್ಲಿದ್ದರು ಮತ್ತು ಅವರಿಗೆ ನೆಹರು, ಗಾಂಧಿ ನೆರವು ನೀಡಲಿಲ್ಲ ಎಂಬುದು ಸುಳ್ಳು

