ಕಳೆದ ಹನ್ನೊಂದು ವರ್ಷಗಳಿಂದ ರಾಹುಲ್ ಗಾಂಧಿಯವರ ಭಾಷಣ, ಬರಹ ಮತ್ತು ಫೋಟೋಗಳನ್ನು ತಿರುಚಿ ಹಂಚಿಕೊಳ್ಳಲಾಗುತ್ತಿತ್ತು. ಅದೇ ರೀತಿಯಾಗಿ ಇತ್ತೀಚೆಗೆ ಪ್ರಿಯಾಂಕಾ ಗಾಂಧಿಯವರಿಗೆ ದೇಶದ್ರೋಹಿ ಎಂಬ ಪಟ್ಟವನ್ನು ಕಟ್ಟುವ ಉದ್ದೇಶದಿಂದಾಗಿ ಕಿಡಿಗೇಡಿಗಳು ಪ್ರಿಯಾಂಕಾ ಗಾಂಧಿಯವರು ಹಾಕಿಕೊಂಡ ಬ್ಯಾಗ್‌ನಲ್ಲಿ ಬರೆದ ಸಂದೇಶವನ್ನು ತಿರುಚಿ ʼಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲʼ ಎಂಬ ಬರಹದ ಬ್ಯಾಗ್‌ನ್ನು ಪ್ರಿಯಾಂಕಾ ಗಾಂಧಿ ಹಾಕಿಕೊಂಡಿದ್ದಾರೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟರ್ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ಪೋಸ್ಟರ್‌ನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2024ರ ಡಿಸೆಂಬರ್ 16ರಂದು ಹಂಚಿಕೊಳ್ಳಲಾದ ಮೂಲ ಚಿತ್ರವೊಂದು ಲಭ್ಯವಾಗಿದೆ.
ಡಿಸೆಂಬರ್ 16ರಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವ ಸಂದೇಶವನ್ನೊಳಗೊಂಡ ಬ್ಯಾಗ್‌ನೊಂದಿಗೆ ಸಂಸತ್ತನ್ನು ಪ್ರವೇಶಿಸಿದ್ದರು. ಈ ಕೆಳಗಿನ ಚಿತ್ರದಲ್ಲಿ ಮೂಲ ಬ್ಯಾಗ್ ಮತ್ತು ವೈರಲ್ ಬ್ಯಾಗ್‌ನ ಚಿತ್ರವನ್ನು ನೋಡಬಹುದು.
ಪ್ರಿಯಾಂಕಾ ಗಾಂಧಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಪ್ಯಾಲೆಸ್ಟೈನ್ ಪರ ಸಂದೇಶವನ್ನು ಹೊಂದಿರುವ ಚೀಲವನ್ನು ಹಾಕಿಕೊಂಡಿರುವ ಗಾಂಧಿಯವರ ಹಲವಾರು ದೃಶ್ಯಗಳ ಸಂಕಲನದ ಮೂಲ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿನ ಮೊದಲ ಚಿತ್ರವು ಮೂಲ ಚಿತ್ರಕ್ಕೆ ಹೊಂದಿಕೆಯಾಗುತ್ತದೆ.
ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವ ಸಂದೇಶವಿರುವ ಬ್ಯಾಗ್‌ನೊಂದಿಗೆ ಪ್ರಿಯಾಂಕ ಗಾಂಧಿ ಸಂಸತ್ತಿಗೆ ಬಂದ ಬಳಿಕ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ನೀವು ನಿಲ್ಲುವುದಿಲ್ಲವೇ ಎಂದು ಬಲಪಂಥೀಯರು ವಾಗ್ದಾಳಿ ನಡೆಸಿದ್ದರು. ಆದರೆ, ಡಿಸೆಂಬರ್ 17ರಂದು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಬೆಂಬಲ ಸೂಚಿಸಿ ಹೊಸ ಬ್ಯಾಗ್‌ನೊಂದಿಗೆ ಗಾಂಧಿಯವರು ಸಂಸತ್ತಿಗೆ ಆಗಮಿಸಿದ್ದರು. ಪ್ರಿಯಾಂಕ ” ಬಾಂಗ್ಲಾದೇಶದ ಹಿಂದೂ ಮತ್ತು ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ” ಎಂಬ ಹಿಂದಿ ಬರಹದ ಸಂದೇಶವುಳ್ಳ ಬ್ಯಾಗ್ ಹಾಕಿಕೊಂಡಿದ್ದರು. ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಬರೆಯಲಾದ ಯಾವುದೇ ಬ್ಯಾಗ್ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಬರೆದಿರುವ ಸಂದೇಶವನ್ನೊಳಗೊಂಡ ಬ್ಯಾಗ್‌ನ್ನು ಪ್ರಿಯಾಂಕಾ ಗಾಂಧಿ ಹಾಕಿಕೊಂಡಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check | ಕೋವಿಡ್ 4ನೇ ಅಲೆಯು 2025ರ ಜನವರಿಯಲ್ಲಿ ಭಾರತವನ್ನು ಅಪ್ಪಳಿಸಲಿದೆ ಎಂದು 2022ರ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.