ಇತ್ತೀಚೆಗೆ “ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಕುಟುಂಬದ ಸಮೇತ ಹೊಸ ವರ್ಷದ ದಿನದಂದು ಮೆಕ್ಕಾಗೆ ಭೇಟಿ ನೀಡಿದ್ದಾರೆ. ಗೌರಿ ಖಾನ್ ಅವರು ತಾವು ಮದುವೆಯಾಗಿ 33 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಮತ್ತು ಮೆಕ್ಕಾದಲ್ಲಿ ಉಮ್ರಾ ಆಚರಿಸಿದ್ದಾರೆ” ಎಂದು ಶಾರುಖ್ ಅವರ ಕುಟುಂಬದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ಪೋಟೋಗಳಲ್ಲಿ ಮುಸ್ಲಿಂ ಉಡುಗೆಯಲ್ಲಿ ನಟ ಶಾರುಖ್ ಖಾನ್, ಅವರ ಪತ್ನಿ ಇಂಟೀರಿಯರ್ ಡಿಸೈನರ್ ಗೌರಿ, ಮಗ ಹಾಗೂ ನಿರ್ಮಾಪಕ ಆರ್ಯನ್ ಅವರು ಕಾಣಿಸಿಕೊಂಡಿದ್ದಾರೆ. ಹಿನ್ನಲೆಯಲ್ಲಿ ಹಜ್ ಯಾತ್ರೆಯ ಮೆಕ್ಕಾದ ಪವಿತ್ರ ಸ್ಥಳ ಕಾಣುತ್ತಿದೆ. ಹಲವರು ಈ ಪೋಟೋಗಳನ್ನು ನಿಜವೆಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್:
ನಟ ಶಾರುಖ್ ಖಾನ್ ಅವರ ಕುಟುಂಬ ಹೊಸ ವರ್ಷದ ದಿನದಂದು ಮೆಕ್ಕಾಗೆ ಭೇಟಿ ನೀಡಿದೆ ಎಂಬುದು ಸುಳ್ಳು. ಹಾಗೆಯೇ ಅವರ ಪತ್ನಿ ಗೌರಿ ಅವರು 33 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬುದು ಸಹ ಸುಳ್ಳಾಗಿದ್ದು, ವೈರಲ್ ಪೋಟೋಗಳು ಕೃತಕ ಬುದ್ಧಿಮತ್ತೆ(ಎಐ)ಯಿಂದ ರಚಿಸಲಾಗಿದ್ದು, ನೈಜ ಪೋಟೋಗಳಲ್ಲ.
ವೈರಲ್ ಪೋಟೋಗಳನ್ನು ಬಳಸಿಕೊಂಡು ನಾವು ಗೂಗಲ್ ಇಮೇಜ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಈ ಕುರಿತಂತೆ ಅನೇಕ ಮಾಧ್ಯಮ ವರದಿಗಳು ಲಭ್ಯವಾಗಿದ್ದು, ಅವುಗಳು ವೈರಲ್ ಪೋಟೋಗಳ ಕುರಿತು ಸತ್ಯಶೋಧನೆ ನಡೆಸಿ ಇವು ನಕಲಿ ಮತ್ತು ಎಐ ರಚಿತ ಚಿತ್ರಗಳು ಎಂದು ವರದಿ ಮಾಡಿವೆ.
ಧರ್ಮದ ಬಗ್ಗೆ ಗೌರಿ ಹೇಳಿರುವುದೇನು?
2005 ರಲ್ಲಿ ಕಾಫಿ ವಿತ್ ಕರಣ್ ಸೀಸನ್ 2 ರ ಚಾಟ್ ಶೋನಲ್ಲಿ, ಗೌರಿ ಅವರು ನಿರೂಪಕ ಕರಣ್ ಜೋಹರ್‌ಗೆ ಧರ್ಮದ ಕುರಿತು ಹೀಗೆ ಹೇಳಿದ್ದರು, “ನಮ್ಮಿಬ್ಬರ ನಡುವೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ, ಆದರೆ ಅದರರ್ಥ ನಾನು ಮತಾಂತರಗೊಂಡು ಮುಸ್ಲಿಮ್ ಆಗುತ್ತೇನೆ ಎಂದಲ್ಲ. ನಾನು ಅದನ್ನು ನಂಬುವುದಿಲ್ಲ. ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ. ಸಹಜವಾಗಿ, ಪರಸ್ಪರ ಗೌರವ ಇರಬೇಕು. ಶಾರುಖ್ ಎಂದಿಗೂ ನನ್ನ ಧರ್ಮಕ್ಕೆ ಅಗೌರವ ತೋರಿಸುವುದಿಲ್ಲ ಮತ್ತು ನಾನು ಅವರ ಧರ್ಮಕ್ಕೆ ಅಗೌರವ ತೋರಿಸುವುದಿಲ್ಲ.”
ಮೂಲತಃ ಗೌರಿ ಅವರು ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಶಾರುಖ್ ಮತ್ತು ಗೌರಿ 1980 ರ ದಶಕದ ಉತ್ತರಾರ್ಧದಲ್ಲಿ ತಮ್ಮ ತವರು ದೆಹಲಿಯಲ್ಲಿ ಪ್ರೀತಿಸಲು ಪ್ರಾರಂಭಿಸಿದರು ಮತ್ತು 1991 ರಲ್ಲಿ ವಿವಾಹವಾದರು. ಅವರಿಗೆ ಆರ್ಯನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ.
ಪ್ರಸ್ತುತ, ಹಿಂದಿ ಚಲನಚಿತ್ರೋದ್ಯಮದ ಆಂತರಿಕ ಕಾರ್ಯಚಟುವಟಿಕೆಗಳ ಸುತ್ತ ಸುತ್ತುವ ಸ್ಟಾರ್ಡಮ್ ಎಂಬ ಹೆಸರಿನ ನೆಟ್‌ಪ್ಲಿಕ್ಸ್ ಇಂಡಿಯಾ ಸರಣಿಯೊಂದಿಗೆ ಆರ್ಯನ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇದನ್ನು ಶಾರುಖ್ ಮತ್ತು ಗೌರಿ ಅವರ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸುತ್ತಿದೆ ಮತ್ತು ಬಾಬಿ ಡಿಯೋಲ್ ಮತ್ತು ಮೋನಾ ಸಿಂಗ್ ಇತರರು ನಟಿಸಿದ್ದಾರೆ ಎಂದು ವರದಿಯಾಗಿದೆ.
ಆದ್ದರಿಂದ ವೈರಲ್ ಆಗಿರುವ ಪೋಟೋಗಳು ನಕಲಿಯಾಗಿದ್ದು ಎಐ ಸೃಷ್ಟಿಯಾಗಿದೆ. ನಟ ಶಾರುಖ್ ಖಾನ್ ತಮ್ಮ ಕುಟುಂಬ ಸಮೇತ ಹೊಸವರ್ಷದ ದಿನ ಮೆಕ್ಕಾಗೆ ಭೇಟಿ ನೀಡಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: ಭಾರತಕ್ಕೆ ಏಲಿಯನ್‌ಗಳ ಪ್ರವೇಶ ಎಂದು AI ಸೃಷ್ಟಿಸಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.