ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳು ಮತ್ತು ಮಠಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್‌ನಲ್ಲಿ, “ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳು, ಮಠಗಳು ಮತ್ತು ಮಹಿಳೆಯರ ಮೇಲೆ ದಾಳಿಗಳನ್ನು ‘ಶಾಂತಿ ದೂತರು’ ನಡೆಸುತ್ತಿದ್ದಾರೆ. ಇವರ ಜನಸಂಖ್ಯೆ ಎಲ್ಲಿ ಹೆಚ್ಚಾಗುತ್ತದೆಯೋ, ಅಲ್ಲಿ ಹಿಂದೂಗಳ ಸ್ಥಿತಿ ಇಂತಹದ್ದೇ ಆಗುತ್ತದೆ” ಎಂದು ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ವಿಡಿಯೋವನ್ನು ಹಂಚಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಹಲವರು ವೈರಲ್ ವಿಡಿಯೋವನ್ನು ಬಳಸಿಕೊಂಡು ಭಾರತದ ಅಲ್ಪಸಂಖ್ಯಾತರ ವಿರುದ್ಧ ತಪ್ಪು ಅರ್ಥ ಬರುವಂತೆ ಕೂಡ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಹ್ಯೂಮನ್ ರೈಟ್ಸ್ ಸೆಂಟರ್ ಫಾರ್ ಬಾಂಗ್ಲಾದೇಶ್ ಎಂಬ ವೆಬ್‌ಸೈಟ್ ಮಾರ್ಚ್ 30, 2025ರಂದು ಪ್ರಕಟಿಸಿದ ವರದಿಯೊಂದರಲ್ಲಿ, ‘ಫೇಸ್‌ಬುಕ್ ಹ್ಯಾಕ್, ಹಿಂದೂ ಸಹಾ ಕುಟುಂಬದ ಮನೆಗೆ ಹಾನಿ, ಲಕ್ಷ್ಮಿ ದೇವಿಯ ಅವಮಾನ’ ಎಂಬ ಶೀರ್ಷಿಕೆ ನೀಡಿ, ಶಂಕರ್ ಸಹಾ ಎಂಬುವವರು ತಂಗೈಲ್ ಜಿಲ್ಲೆಯ ಸಖಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಹಿಂದೂ ಧರ್ಮಾನುಯಾಯಿಯಾದ ಶಂಕರ್ ಸಹಾ, ಸಂಜೆ 7:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, ಇದರಿಂದ ಹಲವರು ತಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹ್ಯಾಕರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಸಹಾ ಪೊಲೀಸರನ್ನು ಒತ್ತಾಯಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಮಾರ್ಚ್ 30, 2025ರಂದು ‘ಸೇವ್ ಬಾಂಗ್ಲಾದೇಶ್ ಹಿಂದೂಸ್’ ಎಂಬ ಎಕ್ಸ್ ಬಳಕೆದಾರರು ವೈರಲ್ ವೀಡಿಯೋಗೆ ಸಮಾನವಾದ ಒಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, “ತಂಗೈಲ್‌ನ ಸಖಿಪುರ ಉಪಜಿಲ್ಲಾದ ಶಂಕರ್ ಸಹಾ ಅವರ ಮನೆಯ ಮೇಲೆ ಮೂಲಭೂತವಾದಿ ಮುಸ್ಲಿಮರು ದೇವದೂಷಣೆಯ ವದಂತಿಗಳನ್ನು ಹಬ್ಬಿಸಿ ದಾಳಿ ನಡೆಸಿ, ಲೂಟಿ ಮಾಡಿದ್ದಾರೆ. ಅಲ್ಲದೆ, ಹಿಂದೂ ದೇವತೆ ಲಕ್ಷ್ಮೀಯ ಪ್ರತಿಮೆಗೆ ಬೆಂಕಿ ಹಚ್ಚಿ ಸಾರ್ವಜನಿಕವಾಗಿ ದಹಿಸಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ದಿ ಡೈಲಿ ಸ್ಟಾರ್‌ನ ಮಾರ್ಚ್ 30, 2025ರ ವರದಿಯ ಪ್ರಕಾರ, ತಂಗೈಲ್‌ನ ಸಖಿಪುರ ಉಪಜಿಲ್ಲಾದಲ್ಲಿ ಫೇಸ್‌ಬುಕ್‌ನಲ್ಲಿ ಮುಸ್ಲಿಮರ ವಿರುದ್ಧ ಕಾಮೆಂಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ರಾತ್ರಿ ಧ್ವಂಸಗೊಳಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸರ ಮಾಹಿತಿಯಂತೆ, ಬರಚೌನಾ ಪ್ರದೇಶದ ವ್ಯಾಪಾರಿ ಶಂಕರ್ ಸಹಾ (44) ಅವರ ಹೇಳಿಕೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ರಾತ್ರಿ 9:30ರ ಸುಮಾರಿಗೆ ಕೋಪಗೊಂಡ ಗುಂಪೊಂದು ಶಂಕರ್ ಅವರ ಮನೆಯನ್ನು ಹಾನಿಗೊಳಿಸಿತು ಎಂದು ವರದಿಯಾಗಿದೆ. ಈ ಬಗ್ಗೆ ಸಖಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಶಂಕರ್ ದಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಶಂಕರ್ ತಮ್ಮ ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ಕುಟುಂಬದ ಮೇಲೆ ಮುಸಲ್ಮಾನರು ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು, ವೈರಲ್ ವಿಡಿಯೋ ಬಾಂಗ್ಲಾದೇಶದ್ದಾಗಿದೆ. ಬಾಂಗ್ಲಾದೇಶದ ಶಂಕರ್ ಸಹಾ (44) ಎಂಬುವವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಕೋಮು ನಿಂದನೆಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು, ಇದರಿಂದ ಶಂಕರ್ ಸಹಾ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು, ಹೀಗಾಗಿ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ಸುಳ್ಳು ಎಂದು ಸಾಬೀತಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | “ಹಿಂದೂವಿನಂತೆ ನಟಿಸಿ ಹಿಂದೂ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ವ್ಯಕ್ತಿ ಪೊಲೀಸ್ ವಶಕ್ಕೆ” ಎಂಬ ವಿಡಿಯೋ ಕಿರುಚಿತ್ರದ್ದು
