ಬಿಹಾರದ ಮುಜಫರ್‌ಪುರದ ಅವನೀಶ್ ಕುಮಾರ್ ಎಂಬ ಯುವಕ ಕೇವಲ 7,000 ರೂಪಾಯಿ ವೆಚ್ಚದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ವಿಮಾನವೊಂದನ್ನು ರಚಿಸಿದ್ದಾನೆ ಎಂಬ ವೀಡಿಯೊ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಒಂದು ಸಣ್ಣ ವಿಮಾನವು ಭೂಮಿಯಿಂದ ಮೇಲಕ್ಕೆ ಏರುವ ದೃಶ್ಯವನ್ನು ನೋಡಬಹುದು.

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, “ಬಿಹಾರದ ಮುಜಫರ್‌ಪುರದ ನಿವಾಸಿ ಅವನೀಶ್ ಕುಮಾರ್ ಎಂಬ ಯುವಕ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ಕೇವಲ 7,000 ರೂಪಾಯಿ ವೆಚ್ಚದಲ್ಲಿ ವಿಮಾನವೊಂದನ್ನು ನಿರ್ಮಿಸಿದ್ದಾನೆ. ಈ ವಿಮಾನವು 300 ಅಡಿ ಎತ್ತರಕ್ಕೆ ಪರೀಕ್ಷಾ ಹಾರಾಟ ನಡೆಸಿ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ. ಯಾವುದೇ ತಾಂತ್ರಿಕ ಜ್ಞಾನವಿಲ್ಲದ ಈ ಬಾಲಕನ ಸಾಧನೆ ವಿಜ್ಞಾನಿಗಳ ಗಮನವನ್ನು ಸೆಳೆದಿದೆ” ಎಂದು ತಿಳಿಸಿದ್ದಾರೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಒಂದು ಪ್ರಕಟವಾಗಿದ್ದು, ಉತ್ತಮ ಗುಣಮಟ್ಟದ ಆ ವೈರಲ್ ವೀಡಿಯೊವನ್ನು ಒಳಗೊಂಡಿದೆ. ಈ ಪೋಸ್ಟ್‌ನಲ್ಲಿ, “ರೈತನ ಮಗ ಜುಲ್ಹಾಸ್‌ನಿಂದ ರಚಿತವಾದ ವಿಮಾನವು ಸಾವಿರಾರು ಜನರ ಸಮ್ಮುಖದಲ್ಲಿ ಆಕಾಶಕ್ಕೆ ಚಿಮ್ಮಿತು” ಎಂದು ಉಲ್ಲೇಖಿಸಲಾಗಿದೆ.

ಬಾಂಗ್ಲಾದೇಶದ ಸುದ್ದಿ ಸಂಸ್ಥೆ ದಿ ಡೈಲಿ ಸ್ಟಾರ್‌ನ ಮಾರ್ಚ್ 6, 2025ರ ವರದಿಯು ಈ ವಿಮಾನವು ಮಾಣಿಕ್‌ಗಂಜ್‌ನ ಶಿಬಲಾಯ ಉಪಜಿಲ್ಲೆಯ ಜಾಫರ್‌ಗಂಜ್ ಗ್ರಾಮದಲ್ಲಿ ಮಾರ್ಚ್ 4, 2025ರಂದು ರಚನೆಗೊಂಡು ಹಾರಾಟ ನಡೆಸಿತು ಎಂದು ತಿಳಿಸಿದೆ. ಈ ವಿಮಾನದ ಸೃಷ್ಟಿಕರ್ತ 28 ವರ್ಷದ ಜುಲ್ಹಾಸ್ ಮೊಲ್ಲಾ, ಕಾಲೇಜು ಬಿಟ್ಟ ಮೆಕ್ಯಾನಿಕ್ ಆಗಿದ್ದು, ಸುಮಾರು 8 ಲಕ್ಷ ಟಾಕಾ ವೆಚ್ಚದಲ್ಲಿ ನಾಲ್ಕು ವರ್ಷಗಳಲ್ಲಿ ಈ ವಿಮಾನವನ್ನು ನಿರ್ಮಿಸಿದ್ದಾರೆ. 100 ಕೆಜಿಗಿಂತಲೂ ಹೆಚ್ಚು ತೂಕದ ಈ ವಿಮಾನವು ಅಲ್ಯೂಮಿನಿಯಂ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಕಬ್ಬಿಣದಿಂದ ತಯಾರಾಗಿದ್ದು, ಸುಮಾರು 50 ಅಡಿ ಎತ್ತರಕ್ಕೆ ಯಶಸ್ವಿಯಾಗಿ ಏರಿ ಸುರಕ್ಷಿತವಾಗಿ ಇಳಿದಿದೆ. ಇದು 7-ಅಶ್ವಶಕ್ತಿಯ ವಾಟರ್ ಪಂಪ್ ಎಂಜಿನ್‌ನಿಂದ ಚಾಲಿತವಾಗಿದ್ದು, ಡಿಜಿಟಲ್ ಸ್ಪೀಡೋಮೀಟರ್‌ನೊಂದಿಗೆ ಸಜ್ಜುಗೊಂಡಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಸಾಮಾಜಿಕ ಜಾಳತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಾರದ ಮುಜಫರ್‌ಪುರದ ನಿವಾಸಿ ಅವನೀಶ್ ಕುಮಾರ್ ಎಂಬ ಯುವಕ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ಕೇವಲ 7,000 ರೂಪಾಯಿ ವೆಚ್ಚದಲ್ಲಿ ವಿಮಾನವೊಂದನ್ನು ನಿರ್ಮಿಸಿದ್ದಾನೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
ಇದನ್ನೂ ಓದಿ : Fact Check | ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
