ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಭೂಕಂಪದಲ್ಲಿ ಸಿಲುಕಿದ ಮಗುವೊಂದನ್ನು ಶ್ವಾನ ರಕ್ಷಿಸಿದೆ ಎಂದು ಬರೆದುಕೊಂಡು ವ್ಯಾಪಕವಾಗಿ ಪೋಸ್ಟ್ ಮಾಡಲಾಗುತ್ತಿದೆ. ಸಾಕಷ್ಟು ಮಂದಿ ವಿವಿಧ ಬರಹಗಳೊಂದಿಗೆ ಮನುಷ್ಯ ಮತ್ತು ಶ್ವಾನದ ಸಂಬಂಧಗಳ ಕುರಿತು ಭಾವನಾತ್ಮಕವಾಗಿ ಬರೆದುಕೊಂಡು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಕೂಡ ಶ್ವಾನ ಒಂದು ಮಗುವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರುವುದು ಕಂಡುಬಂದಿದ್ದು, ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿದ್ದಾರೆ. ಹೀಗಾಗಿ ಇದನ್ನು ತಮ್ಮ ವಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://www.youtube.com/watch?v=WZanYMs72xc
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ 28 ಫೆಬ್ರವರಿ 2025 ರಂದು ಡೈಲಿ ಪಿಲ್ ಎಂಬ ಹೆಸರಿನ ಯುಟ್ಯೂಬ್ ಚಾನಲ್ನಲ್ಲಿ ನಾಯಿಯೊಂದು ಭೂಕಂಪದ ನಂತರ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಬಿದ್ದ ಮಗುವನ್ನು ರಕ್ಷಿಸಲು ಸಹಾಯ ಮಾಡಿತು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ವಿಡಿಯೋ ಕಂಡು ಬಂದಿದೆ.
https://www.youtube.com/watch?v=WZanYMs72xc
ಇನ್ನು ಈ ಯುಟ್ಯೂಬ್ ಚಾನೆಲ್ ಅನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ, ಇದರ ಅಬೌಟ್ ವಿಭಾಗದಲ್ಲಿ ವಿಡಂಭನಾತ್ಮಕವಾದ ಮಾಹಿತಿಯನ್ನು ನೀಡಲಾಗಿದ್ದು, ಈ ವಿಡಿಯೋಗಳನ್ನು ಎಐನಿಂದ ನಿರ್ಮಿಸಲಾಗಿದೆ ಮತ್ತು ಮನೋರಂಜನಾತ್ಮಕ ಉದ್ದೇಶಗಳಿಗಾಗಿ ಸೃಷ್ಟಿಸಲಾಗಿದೆ. ಯಾವುದೇ ಕಾರಣಕ್ಕೂ ಇದನ್ನು ನಿಜವೆಂದು ಭಾವಿಸಬೇಡಿ ನನಗೆ ತಪ್ಪು ಮಾಹಿತಿ ಹರಡುವ ಉದ್ದೇಶವಿಲ್ಲ ಎಂದು ಬರೆದಿರುವುದು ಕಂಡುಬಂದಿದೆ.

ಇನ್ನು ವೈರಲ್ ವಿಡಿಯೋ ಎಐನಿಂದ ರಚಿತವಾಗಿದೆ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ನಾವು ಎಐ ಚಿತ್ರಗಳು ಮತ್ತು ವಿಡಿಯೋವನ್ನು ಪತ್ತೆ ಹಚ್ಚುವ ಹೈವ್ AI ವೆಬ್ತಾಣದ ಮೂಲಕ ವಿಡಿಯೋವಿನ ವಿವಿಧ ಕೀ ಪ್ರೇಮ್ ಗಳನ್ನು ಪರಿಶೀಲನೆ ನಡೆಸಿದ್ದು, ಈ ವಿಡಿಯೋವನ್ನು ಶೇಕಡ 98.7 ರಷ್ಟು ಎಐನಿಂದ ನಿರ್ಮಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ನಾಯಿಯೊಂದು ಭೂಕಂಪವಾದ ನಂತರ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಗುವೊಂದನ್ನು ರಕ್ಷಿಸಿದೆ ಎಂಬ ವಿಡಿಯೋ ಎಐನಿಂದ ನಿರ್ಮಿಸಲಾಗಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕರ್ನಾಟಕದ 2025-26ನೇ ಸಾಲಿನ ಬಜೆಟ್ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ವಾಸ್ತವ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

