“ಒಬ್ಬ ಮಹಿಳೆ ತನ್ನ ಗಂಡನ ಜೊತೆ ಜಗಳವಾಡಿದ ನಂತರ ಕಾರಿನಿಂದ ಇಳಿದಳು, ಹುಲಿ ಅವಳನ್ನು ಕಾಡಿಗೆ ಎಳೆದೊಯ್ದಿತು..” ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಮಹಿಳೆಯನ್ನು ರಕ್ಷಿಸಿರುವ ಸಾಧ್ಯತೆ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವೈರಲ್ ವಿಡಿಯೋವಿಗೆ ಬೇರೆಯದ್ದೇ ಆಯಾಮಗಳನ್ನು ನೀಡಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಕೂಡ ಮಹಿಳೆಯನ್ನು ಹುಲಿಯೊಂದು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ವೈರಲ್ ವಿಡಿಯೋ ನಿಜಕ್ಕೂ ಭಾರತದ್ದೇನಾ ಎಂಬ ಗೊಂದಲವನ್ನು ಮೂಡಿಸಿದೆ. ಹೀಗೆ ಸಾರ್ವಜನಿಕರಲ್ಲಿ ವಿವಿಧ ರೀತಿಯ ಚರ್ಚೆಯನ್ನು ಹುಟ್ಟು ಹಾಕಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ (CGTN) ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ಪತ್ತೆಯಾಗಿದೆ. ಇದನ್ನು ಎಂಟು ವರ್ಷಗಳ ಹಿಂದೆ ಜುಲೈ 2016 ರಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿನ ಮಾಹಿತಿಯ ಪ್ರಕಾರ ಬೀಜಿಂಗ್ನ ವನ್ಯಜೀವಿ ಉದ್ಯಾನವನದಲ್ಲಿ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿತ್ತು ಎಂದು ಉಲ್ಲೇಖಿಸಲಾಗಿದೆ.

ಇದರಿಂದ ಮಾಹಿತಿ ಪಡೆದುಕೊಂಡ ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಇನ್ನಷ್ಟು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಎಬಿಸಿ ನ್ಯೂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿ ಕಂಡು ಬಂದಿದೆ. ಅದರಲ್ಲಿ ಕೂಡ ನಮಗೆ ಬೀಜಿಂಗ್ನ ವನ್ಯಜೀವಿ ಉದ್ಯಾನವನದಲ್ಲಿ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿತ್ತು ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಇದೇ ರೀತಿಯಲ್ಲಿ ಇನ್ನಷ್ಟು ವರದಿಗಳು ಕೂಡ ಕಂಡು ಬಂದಿವೆ. ಹೀಗಾಗಿ ಎಂಟು ವರ್ಷಗಳ ಹಳೆಯ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೀಜಿಂಗ್ನ ವನ್ಯಜೀವಿ ಉದ್ಯಾನವನದಲ್ಲಿ ನಡೆದ ಹುಲಿ ದಾಳಿಯ ಪ್ರಕರಣವನ್ನು ಭಾರತದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದ್ದು, ವೈರಲ್ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ದೆಹಲಿಯ ರಾಜೀವ್ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಅಪಹರಣ ಎಂದು ನಾಟಕೀಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

