ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಈಗ ಯುದ್ಧದ ಕಾರ್ಮೋಡ ಆವರಿಸಿದೆ. ಸದ್ಯದ ಮಟ್ಟಿಗೆ ಭಾರತೀಯ ಸೇನೆ ಉಗ್ರರನ್ನು ದಮನ ಮಾಡಲು ಎಲ್ಲಾ ರೀತಿಯ ಕಾರ್ಯಚರಣೆಯನ್ನು ಆರಂಭಿಸಿದ್ದು, ಈ ನಡುವೆ ಪಾಕಿಸ್ತಾನದ ಮೇಲೂ ಸೇನಾ ಕಾರ್ಯಚರಣೆಗೆ ತಯಾರಿಯನ್ನು ನಡೆಸುತ್ತಿದೆ ಎಂಬ ವರದಿಗಳು ಬರುತ್ತಿವೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಭಾರತೀಯ ಸೇನೆ ಪಿಒಕೆಯಲ್ಲಿ ದಾಳಿಯನ್ನು ನಡೆಸಿದ್ದು, ಅಲ್ಲಿನ ನಾಗರಿಕರ ಮನೆಗಳು ಧ್ವಂಸಗೊಂಡಿವೆ ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋ ನೋಡಿದ ಹಲವು ಮಂದಿ ಇದನ್ನು ನಿಜವಿರಬಹುದು ಎಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡು, “ಭಾರತೀಯ ಸೇನೆ ಗಡಿಯಲ್ಲಿ ಯುದ್ಧ ಆರಂಭಿಸಿದೆ, ಭಾರತೀಯ ಸೇನೆಯ ಗುಂಡಿನ ದಾಳಿಗೆ ಪಿಒಕೆಯಲ್ಲಿ ಹಲವು ಮನೆಗಳು ಧ್ವಂಸವಾಗಿದೆ ಎಂದು ಪಾಕಿಸ್ತಾನದ ಜನರು ಸ್ವತಃ ವಿಡಿಯೋ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 24 ಅಕ್ಟೋಬರ್ 2019 ರಂದು ಎಕ್ಸ್ನಲ್ಲಿ ಅಪ್ಲೋಡ್ ಮಾಡಲಾದ ಪೋಸ್ಟ್ ಒಂದು ಕಂಡುಬಂದಿದೆ. ಇದರಲ್ಲಿ ಒಂದು ದೃಶ್ಯ ನೀಲಂ ಪ್ರದೇಶದಿಂದ ಮತ್ತು ಮತ್ತೊಂದು ದೃಶ್ಯ ಎಲ್ಒಸಿ ಇಂದ ಎಂದು ಶೀರ್ಷಿಕೆ ನೀಡಿರುವುದು ಕಂಡುಬಂದಿದೆ.

ಇದೇ ರೀತಿಯ ಮತ್ತೊಂದು ಪೋಸ್ಟ್ ಕಂಡುಬಂದಿದ್ದು ಇದರಲ್ಲಿ “ಬ್ರೇಕಿಂಗ್ : ಎಲ್ಒಸಿ ಅಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಈಗ ಸಂಘರ್ಷ ನಡೆಯುತ್ತಿದೆ, ನೀಲಂ ಪ್ರದೇಶದಲ್ಲಿ ಪಾಕಿಸ್ತಾನ ಕಡೆಯ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನು 20 ಅಕ್ಟೋಬರ್ 2019 ರಂದು ಎನ್ಡಿಟಿವಿ ವರದಿಯೊಂದು ಕಂಡುಬಂದಿದ್ದು, ಇದರಲ್ಲಿ “ಪಿಒಕೆಯಲ್ಲಿ 3 ಭಯೋತ್ಪಾದಕ ಶಿಬಿರಗಳು ನಾಶ 6- 10 ಪಾಕ್ ಸೈನಿಕರ ಹತ್ಯೆ: ಸೇನಾ ಮುಖ್ಯಸ್ಥ” ಎಂಬ ಶೀರ್ಷಿಕೆ ನೀಡಿ ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. “ಕುಪ್ವಾರಾದ ತಂಗ್ಧರ್ ವಲಯದ ಎದುರಿನ ನೀಲಂ ಕಣಿವೆಯಲ್ಲಿರುವ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳು ಫಿರಂಗಿ ದಾಳಿಯಲ್ಲಿ ನಾಶವಾದವು ಎಂದು ಮೂಲಗಳು ತಿಳಿಸಿವೆ. ಭಾರತೀಯ ಭೂಪ್ರದೇಶಕ್ಕೆ ಭಯೋತ್ಪಾದಕರನ್ನು ಕಳುಹಿಸಲು ಪಾಕಿಸ್ತಾನ ಸೇನೆ ನೀಡಿದ ಬೆಂಬಲಕ್ಕೆ ಪ್ರತೀಕಾರವಾಗಿ ಫಿರಂಗಿ ದಾಳಿ ನಡೆಸಲಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಇತ್ತೀಚೆಗೆ ಪಹಲ್ಗಾಮ್ ದಾಳಿಯ ನಂತರ, ಭಾರತೀಯ ಸೇನೆ ಪಿಒಕೆ ಮೇಲೆ ದಾಳಿ ನಡೆಸಿದ್ದು, ಅಲ್ಲಿನ ನಾಗರಿಕರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ 2019 ರದ್ದಾಗಿದೆ. ಇದನ್ನು ಬಳಸಿಕೊಂಡು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪುರೋಹಿತರ ಸಲಹೆಯನ್ನು ಅನುಸರಿಸಿ ರಾಜಸ್ಥಾನದ ಜನರು ಸೌರ ಫಲಕಗಳನ್ನು ಒಡೆದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

