ಪ್ರಯಾಗ್ರಾಜ್ನ ಕುಂಭಮೇಳದ ಮೂಲಕ ದೇಶಾದ್ಯಂತ ವ್ಯಾಪಕವಾಗಿ ವೈರಲ್ ಆದ ಯುವತಿ ಮೊನಾಲಿಸ ಭೋಂಸ್ಲೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೋಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಪ್ರಕಾರ ಮೊನಾಲಿಸ ಈಗ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ. ಹಲವರು ವಿವಿಧ ರೀತಿಯ ಪೋಸ್ಟ್ಗಳನ್ನು ಈ ಕುರಿತು ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಜನಸಮೂಹವೊಂದು ನಿಂತಿರುವುದು ಕಂಡುಬಂದಿದ್ದು, ಇದನ್ನು ಹಂಚಿಕೊಂಡಿರುವ ಹಲವರು ಇತ್ತೀಚಿಗೆ ನಿರ್ದೇಶಕ ಸನೋಜ್ ಮಿಶ್ರಾ ಮೇಲೆ ಅತ್ಯಾಚಾರದ ಆರೋಪವನ್ನು ಹೊರಿಸಿದ ನಂತರ, ಮೊನಾಲಿಸ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ. ಇದನ್ನು ಹಲವರು ನಿಜವೆಂದು ನಂಬಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಇದಕ್ಕೆ ಸಂಬಂಧಿಸಿದ ರೀತಿಯಲ್ಲಿ ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಘಟನೆ ನಿಜವಾಗಿದ್ದರೆ ರಾಷ್ಟ್ರ ಮಟ್ಟದಿಂದ, ಸ್ಥಳೀಯ ಮಟ್ಟದ ಮಾಧ್ಯಮದವರಿಗೂ ಅಧಿಕೃತ ಸುದ್ದಿಗಳು ಹೊರ ಬರುತ್ತಿದ್ದವು.

ವೈರಲ್ ವಿಡಿಯೋವಿನ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಕೂಡ ನಾವು ಹುಡುಕಾಟವನ್ನು ನಡೆಸಿದೆವು. ಆದರೆ ವೈರಲ್ ವಿಡಿಯೋಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳು ಕೂಡ ನಮಗೆ ಲಭ್ಯವಾಗಿಲ್ಲ. ಹಾಗಾಗಿ ಈ ವಿಡಿಯೋಗೂ ವೈರಲ್ ಪೋಸ್ಟ್ನ ಬರಹಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ “ನನ್ನ ಮಗಳು ಸುರಕ್ಷಿತವಾಗಿದ್ದಾಳೆ, ಆಘಾತಕಾರಿ ಹೇಳಿಕೆ ನೀಡಿದ ಮೊನಾಲಿಸ ದೊಡ್ಡಪ್ಪ” ಎಂಬ ಶೀರ್ಷಿಕೆಯಲ್ಲಿ ಒನ್ ಇಂಡಿಯಾ ಕನ್ನಡ ಪ್ರಕಟಿಸಿರುವ ವರದಿ ಕಂಡುಬಂದಿದೆ. ಈ ಮೂಲಕ ಮೊನಾಲಿಸ ಜೀವಂತವಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ ನಂತರ, ಮೊನಾಲಿಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ವಿಡಿಯೋಗೂ ಮೊನಾಲಿಸಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕ್ರಿಕೆಟಿಗ ಎಂ.ಎಸ್. ಧೋನಿ ಬಿಜೆಪಿ ಸೇರುತ್ತಿದ್ದಾರೆ ಎಂಬುದು ಸುಳ್ಳು, ವೈರಲ್ ಫೋಟೋ AI ನಿಂದ ಸೃಷ್ಟಿಸಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

