ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವರದಿಯೊಂದು ವೈರಲ್ ಆಗುತ್ತಿದ್ದು ಅದರಲ್ಲಿ “ಅಮೇರಿಕಾದ ಮಾಜಿ ಅಧ್ಯಕ್ಷ ಬಾರಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆ “ಎ ಪ್ರಾಮಿಸ್ಡ್ ಲ್ಯಾಂಡ್” ನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷ ಭಾರತದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಪುಸ್ತಕದಲ್ಲಿ ಆರೋಪಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವವರು “ಬರಾಕ್ ಒಬಾಮ ಅವರು ತಮ್ಮ “ದಿ ಪ್ರಾಮಿಸ್ಡ್ ಲ್ಯಾಂಡ್” ಪುಸ್ತಕದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ 26/11 ಮುಂಬೈ ದಾಳಿಯ ನಂತರ ಸೋನಿಯಾ ಗಾಂಧಿ (ಎಂಎಂಎಸ್) ಸರ್ಕಾರ… ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಪ್ಪಿಸಿದೆ!! ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಮುಸ್ಲಿಂ ವಿರೋಧಿ ಭಾವನೆಗಳು ಹೆಚ್ಚಾಗಬಹುದು, ಅದು ಪರೋಕ್ಷವಾಗಿ ಬಿಜೆಪಿಯ ಸ್ಥಾನವನ್ನು ಬಲಪಡಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ನ ಮನಸ್ಥಿತಿ. ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ಯಾವುದೇ ಹಂತಕ್ಕೂ ತಲುಪುತ್ತದೆ. ಆತ್ಮೀಯ ಹಿಂದೂಗಳೇ.. ನೀವು ಹಿಂದಿನದನ್ನು ರದ್ದುಗೊಳಿಸಲು ಸಾಧ್ಯವಿಲ್ಲ, ಆದರೆ ಖಂಡಿತವಾಗಿಯೂ ನಿಮ್ಮ ಮತ್ತು ದೇಶದ ಭವಿಷ್ಯವನ್ನು ಉಳಿಸಬಹುದು. ಯಾವತ್ತೂ ಕಾಂಗ್ರೆಸ್ಗೆ ಮತ ಹಾಕಬೇಡಿ. ಕಾಂಗ್ರೆಸ್ಗೆ ಮತ ಹಾಕುವುದು ನಿಮ್ಮ ಸಮಾಧಿಯನ್ನು ತಾವೇ ಅಗೆದುಕೊಂಡಂತೆ!” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೇ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದು ಸುಳ್ಳು ಸುದ್ಧಿ ಹಂಚಿಕೊಳ್ಳಲು ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮ ಚಾನೆಲ್ನ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆ ಸಹ ಈ ವಿಡಿಯೋವನ್ನು ಹಂಚಿಕೊಂಡು ಅದೇ ಆರೋಪ ಮಾಡಿದ್ದಾರೆ.
EVERY HINDU MUST WATCH
Barack Obama,in his book "The Promised Land" revealed that
Sonia Gandhi (MMS) government after the 26/11 Mumbai Attack… Just avoided to take action against Pakistan!!They feared taking action against Pakistan would rise anti-Muslim sentiments, that… pic.twitter.com/hPD48hkIcc
— Mahesh Vikram Hegde 🇮🇳 (@mvmeet) November 27, 2024
ಈ ವಿಡಿಯೋ ಹಂಚಿಕೊಂಡಿರುವ ಅನೇಕರ ಪೋಸ್ಟ್ಗಳನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ವೈರಲ್ ವಿಡಿಯೋದಲ್ಲಿ ನಿರೂಪಕಿ ಅವರು ಆರೋಪಿಸಿರುವ ಮಾಹಿತಿಗಳು ಮತ್ತು ವೈರಲ್ ಸಂದೇಶದ ಮಾಹಿತಿಗಳು ಎರಡೂ ಸಹ ಸುಳ್ಳಿನಿಂದ ಕೂಡಿದೆ. ಬರಾಕ್ ಒಬಾಮ ಅವರು ಕಾಂಗ್ರೆಸ್ ಪಕ್ಷ ಭಯೋತ್ಪದನೆಗೆ ಬೆಂಬಲ ನೀಡುತ್ತಿರುವ ಕುರಿತು ಆರೋಪಿಸಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ನಮ್ಮ ತಂಡ ಬರಾಕ್ ಒಬಾಮ ಅವರ ಎ ಪ್ರಾಮಿಸ್ಡ್ ಲ್ಯಾಂಡ್ ಕೃತಿಯಲ್ಲಿ ಕಾಂಗ್ರೆಸ್ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತದ ಕುರಿತು ಆಡಿರುವ ಮಾಹಿತಿಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡಿದಾಗ ಅವರ ಕೃತಿಗೆ ಸಂಬಂಧಿಸಿದಂತೆ ಅನೇಕ ವರದಿಗಳು ಲಭ್ಯವಾಗಿದ್ದು, ನ್ಯೂಸ್ 18 ಅವರು 17 ನವೆಂಬರ್ 2020 ರಂದು ಭಾರತಕ್ಕೆ ಸಂಬಂಧಿಸಿದಂತೆ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಮಾಹಿತಿಗಳ ಕುರಿತು ಲೇಖನವೊಂದನ್ನು ಪ್ರಕಟಿಸಿದ್ದು ಅದರಲ್ಲಿ “ಬರಾಕ್ ಒಬಾಮಾ ಅವರು ಮಹಾತ್ಮಾ ಗಾಂಧಿಯವರನ್ನು ಹೊಗಳಿದ್ದಾರೆ, ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಭಾರತದ ಜಾತಿ, ಧಾರ್ಮಿಕ ವಿಭಜನೆ ಮತ್ತು ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಪಕ್ಷದೊಳಗಿನ ಸ್ವಜನಪಕ್ಷಪಾತದ ಸಮಸ್ಯೆಯ ಬಗ್ಗೆಯೂ ಪರಿಶೀಲಿಸುತ್ತದೆ.” ಎಂದು ಬರೆದಿದ್ದಾರೆ.
ಈ ಲೇಖನದಲ್ಲಿ ಒಬಾಮ ಅವರು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾದ ಸಂದರ್ಭ ಮತ್ತು ಅವರ ಕುರಿತು ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಅದನ್ನು ಈ ಕೆಳಗೆ ನೋಡಬಹುದು. ಇಲ್ಲಿ ವೈರಲ್ ವಿಡಿಯೋದಲ್ಲಿ ಮಾಡಿರುವ ಆರೋಪದ ಉಲ್ಲೇಖ ಇಲ್ಲದಿರುವುದನ್ನು ಗಮನಿಸಬಹುದು.

ಇನ್ನೂ, ಟೈಮ್ಸ್ ಆಫ್ ಇಂಡಿಯಾದ ಲೇಖನದಲ್ಲಿ “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ತಮ್ಮ ಮೊದಲ ಸಂವಾದವನ್ನು ವಿವರಿಸಿದ ಒಬಾಮಾ ಅವರು “ಅವರು ಬುದ್ಧಿವಂತ ಮತ್ತು ಶ್ರದ್ಧೆಯಿಂದ ಕಾಣುತ್ತಿದ್ದರು, ಅವರ ನೋಟವು ಅವರ ತಾಯಿಯಂತೆಯೇ ಕಾಣುತ್ತದೆ” ಎಂದು ಹೇಳಿದರು. ಗಾಂಧಿಯವರು “ಪ್ರಗತಿಪರ ರಾಜಕೀಯದ ಭವಿಷ್ಯ” ಕುರಿತು ತಮ್ಮ ಆಲೋಚನೆಗಳನ್ನು ಚರ್ಚಿಸಿದರು ಮತ್ತು 2008 ರಲ್ಲಿ ಅಧ್ಯಕ್ಷರ ಪ್ರಚಾರದ ಅನುಭವದ ಬಗ್ಗೆ ಒಬಾಮಾ ಅವರನ್ನು ಕೇಳಿದರು. ಆದರೆ ಅವರು “ಅವರು(ರಾಹುಲ್) ವಿಚಲಿತ, ಮತ್ತು ರೂಪಿಸದ ಗುಣದವರು” ಎಂದು ಸೇರಿಸಿದರು. “ಅವರು ಕೋರ್ಸ್ವರ್ಕ್ ಮಾಡಿದ ವಿದ್ಯಾರ್ಥಿಯಂತೆ ಮತ್ತು ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕರಾಗಿದ್ದರು ಆದರೆ ಆಳವಾಗಿ ಈ ವಿಷಯವನ್ನು ಕರಗತ ಮಾಡಿಕೊಳ್ಳುವ ಸಾಮರ್ಥ್ಯ ಅಥವಾ ಉತ್ಸಾಹವನ್ನು ಹೊಂದಿಲ್ಲ” ಎಂದು ಒಬಾಮಾ ಬರೆದಿದ್ದಾರೆ.

ಮನಮೋಹನ್ ಸಿಂಗ್ ಅವರ ಕುರಿತಂತೆ “ಹಲವು ವರ್ಷಗಳಿಂದ ಮನಮೋಹನ್ ಸಿಂಗ್ ಅವರೊಂದಿಗೆ ಬೆಚ್ಚಗಿನ ಮತ್ತು ಫಲದಾಯಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎಂದು ಮಾಜಿ ಅಧ್ಯಕ್ಷ ಒಬಾಮಾ ಹೇಳಿದರು. ಅವರು ಮಾಜಿ ಪ್ರಧಾನಿಯನ್ನು ಹೊಗಳಿದರು, ಅವರನ್ನು “ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಸಭ್ಯತೆಯ” ವ್ಯಕ್ತಿ ಎಂದು ಕರೆದರು. “ಭಾರತದ ಪ್ರಧಾನಿ ಮನಮೋಹನ್ ಸಿಂಗ್, ಈ ಮಧ್ಯೆ, ತಮ್ಮ ರಾಷ್ಟ್ರದ ಆರ್ಥಿಕತೆಯ ಆಧುನೀಕರಣವನ್ನು ವಿನ್ಯಾಸಗೊಳಿಸಿದ್ದರು” ಎಂದು ಒಬಾಮಾ ಬರೆದಿದ್ದಾರೆ. ಸಿಂಗ್ ಅವರು “ಬುದ್ಧಿವಂತ, ಚಿಂತನಶೀಲ ಮತ್ತು ನಿಷ್ಠುರವಾಗಿ ಪ್ರಾಮಾಣಿಕ” ಎಂದು ಅವರು ಕಂಡುಕೊಂಡರು ಎಂದು ಅವರು ಹೇಳಿದರು.
2010 ರಲ್ಲಿ ಭಾರತಕ್ಕೆ ತನ್ನ ಮೊದಲ ಭೇಟಿಯನ್ನು ನೆನಪಿಸಿಕೊಂಡ ಒಬಾಮಾ, ಬಿಜೆಪಿಯ ಪ್ರಭಾವವನ್ನು ಬಲಪಡಿಸಿದ “ಮುಸ್ಲಿಂ ವಿರೋಧಿ ಭಾವನೆ” ಹೆಚ್ಚುತ್ತಿರುವ ಬಗ್ಗೆ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. “‘ಅನಿಶ್ಚಿತ ಕಾಲದಲ್ಲಿ, ಶ್ರೀ ರಾಷ್ಟ್ರಪತಿ,’ ಪ್ರಧಾನ ಮಂತ್ರಿ (ಮನಮೋಹನ್ ಸಿಂಗ್) ಹೇಳಿದರು, ‘ಧಾರ್ಮಿಕ ಮತ್ತು ಜನಾಂಗೀಯ ಐಕಮತ್ಯದ ಕರೆಯು ಅಮಲೇರಿಸಬಹುದು. ಮತ್ತು ಭಾರತದಲ್ಲಿ ಅಥವಾ ಬೇರೆಲ್ಲಿಯಾದರೂ ಅದನ್ನು ಬಳಸಿಕೊಳ್ಳುವುದು ರಾಜಕಾರಣಿಗಳಿಗೆ ಅಷ್ಟು ಕಷ್ಟವಲ್ಲ,” ಎಂದು ಅವರು ನೆನಪಿಸಿಕೊಂಡರು.
ಈ ಕುರಿತು ಅಲ್ಜಜೀರಾ ಸಹ ವರದಿ ಮಾಡಿದ್ದು ಅಲ್ಲಿಯೂ ಸಹ ಕಾಂಗ್ರೆಸ್ ಮುಂಬೈ ದಾಳಿಯ ನಂತರ ಪಾಕಿಸ್ಥಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಪ್ಪಿಸಿದೆ ಎಂದು ಒಬಾಮ ಆರೋಪಿಸಿರುವ ಕುರಿತು ಮಾಹಿತಿ ಇಲ್ಲ.
ಇಂಡಿಯನ್ ಎಕ್ಸ್ಪ್ರೆಸ್ ಅವರು ಒಬಾಮ ಅವರ ಆತ್ಮಚರಿತ್ರೆಯಲ್ಲಿ ಭಾರತ ಮತ್ತು ಇಲ್ಲಿನ ರಾಜಕಾರಣದ ಕುರಿತು ಬರೆದಿರುವ ವಿಷಯಗಳ ಕುರಿತು ವಿವರಿಸುವ ವಿಡಿಯೋ ವರದಿಯೊಂದನ್ನು ಪ್ರಕಟಿಸಿದ್ದು, ಈ ಕೆಳಗೆ ನೀವು ನೋಡಬಹುದು.
ಆದ್ದರಿಂದ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು. ಅವರು ಪ್ರಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಆಡಳಿತ, ಅದರ ದೌರ್ಬಲ್ಯಗಳ ಕುರಿತು ಉಲ್ಲೇಖಿಸಿದ್ದಾರೆ ಮತ್ತು ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಹೆಚ್ಚಾಗುತ್ತಿರುವ ಕೋಮು ಧೃವೀಕರಣರದ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಪುತ್ರಿ ಕುಡಿದು ವಾಹನ ಚಲಾಯಿಸಿದ್ದಾಳೆ ಎಂಬುದು ಸುಳ್ಳು

