ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಾರಿ ಬಜೆಟ್ ಮಂಡಿಸಿದ ನಂತರ ಹಲವು ವಿವಾದಗಳು ಹುಟ್ಟಿಕೊಂಡಿವೆ. ಅದರಲ್ಲೂ ಪ್ರಮುಖವಾಗಿ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ಕಲೆ ಕಲಿಸಲಾಗುತ್ತದೆ ಎಂಬು ಸಿಎಂ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಕಡೆಗಣನೆ ಮಾಡುತ್ತಿದೆ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿ ಕೋಮು ದ್ವೇಷವನ್ನು ಕೂಡ ಹರಡಲಾಗುತ್ತಿದೆ.

ಇನ್ನೂ ಕೆಲವರು ಸಂಬಂಧವೇ ಇಲ್ಲದೆ “ಕರ್ನಾಟಕದಲ್ಲಿ ಹಿಂದೂ ಹುಡುಗಿ ಸ್ವಾತಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.. ಒಬ್ಬ ಅಪರಾಧಿ ನಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.. ವಿಪರ್ಯಾಸವೆಂದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಆತ್ಮರಕ್ಷಣಾ ತರಬೇತಿ ನೀಡುವುದಾಗಿ ಘೋಷಿಸಿದ್ದಾರೆ!!” ಎಂದು ಸ್ವಾತಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ “ಕರ್ನಾಟಕದ 169 ಶಿಕ್ಷಣ ಸಂಸ್ಥೆಗಳಲ್ಲಿ 25 ಸಾವಿರ ಹುಡುಗಿಯರಿಗೆ ಆತ್ಮರಕ್ಷನೆ ಕಲಿಕೆಗೆ ಅವಕಾಶ’ ಎಂಬ ಶೀರ್ಷಿಕೆಯೊಂದಿಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ 8 ಮಾರ್ಚ್ 2025 ರಂದು ವರದಿ ಪ್ರಕಟಿಸಿರುವುದು ಕಂಡು ಬಂದಿದೆ. ಈ ಆತ್ಮರಕ್ಷಣೆ ತರಬೇತಿ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯವು ನೋಡಿಕೊಳ್ಳುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25,000 ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ ಎಂದು 7 ಮಾರ್ಚ್ 2025 ರ ಎಕನಾಮಿಕ್ ಟೈಮ್ಸ್ ವರದಿಯಲ್ಲೂ ಉಲ್ಲೇಖಿಸಲಾಗಿದೆ.

2025-2026 ರ ಕರ್ನಾಟಕ ರಾಜ್ಯ ಬಜೆಟ್ ಕುರಿತಾದ ದಾಖಲೆಯಲ್ಲಿಯೂ ಇದೇ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ವಿಭಾಗದ ಅಡಿಯಲ್ಲಿ ಪಾಯಿಂಟ್ 221 ರಲ್ಲಿ, “ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು” ಎಂಬ ಅಂಶವನ್ನು ಒಳಗೊಂಡಿರುವುದು ಕಂಡು ಬಂದಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್ಸೈಟ್ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಮತ್ತು ಪಾರ್ಸಿ ಅಲ್ಪಸಂಖ್ಯಾತರ ವ್ಯಾಪ್ತಿಗೆ ಬರುತ್ತವೆ. ಹಾಗೆಯೇ ಮುಸಲ್ಮಾನರು ಮಾತ್ರ ಅಲ್ಪ ಸಂಖ್ಯಾತರಲ್ಲ ಎಂಬುದು ಕೂಡ ಇದರಿಂದ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಪೋಸ್ಟ್ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಈ ಬಾರಿಯ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯನವರು ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದ್ದಾರೆ ಎಂಬುದು ಸುಳ್ಳು. ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ಕಲಿಸಲಾಗುತ್ತದೆ. ಹಾಗೆಯೇ ಈ ಅಲ್ಪ ಸಂಖ್ಯಾತರ ಸಮುದಾಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಕೂಡ ಬರುತ್ತಾರೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ತೆಲಂಗಾಣದ ಅಂಬಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಶಿಗೆ ಹೋಗಲು ಸುರಂಗ ಮಾರ್ಗ ಪತ್ತೆಯಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

