ಏಪ್ರಿಲ್ 28-29ರ ರಾತ್ರಿ ಪಾಕಿಸ್ತಾನ ಸೇನೆಯು ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಮತ್ತು ಅಖ್ನೂರ್ ವಲಯದಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನದಿಂದ ಸತತ ಐದನೇ ರಾತ್ರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಕಿಸ್ತಾನ ಸೇನೆಯು ಎಲ್ಒಸಿಯ ಉದ್ದಕ್ಕೂ ಎರಡು ಭಾರತೀಯ ಸೇನಾ ಠಾಣೆಗಳನ್ನು ನಾಶಪಡಿಸಿದೆ ಎಂಬ ಪೋಸ್ಟ್ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಗುಂಡಿನ ದಾಳಿಯ ದೃಶ್ಯಗಳೊಂದಿಗೆ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋವನ್ನು ನೋಡಿದ ಹಲವು ಮಂದಿ ವಿವಿಧ ರೀತಿಯಾದ ಬರಹಗಳೊಂದಿಗೆ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಸಂಪೂರ್ಣವಾಗಿ ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋವನ್ನು ಎರಡು ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಎಡಿಟ್ ಮಾಡಿರುವುದು ಕಂಡು ಬಂದಿದೆ.

ಇದರಕ್ಕೆ ಪೂರಕ ಎಂಬಂತೆ ನವೆಂಬರ್ 23, 2024 ರಂದು @FarazPervaiz3 ಎಂಬ ಬಳಕೆದಾರರ X ಪೋಸ್ಟ್ ಒಂದು ಕಂಡು ಬಂದಿದೆ , ಅದರಲ್ಲಿ “ಕೋಮು ಗಲಭೆಗಳು, ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯ ಸುನ್ನಿ ಬಹುಸಂಖ್ಯಾತ ಪಟ್ಟಣವಾದ ಬಗಾನ್ನಲ್ಲಿನ ಮಾರುಕಟ್ಟೆಗೆ ಸಶಸ್ತ್ರ ಶಿಯಾ ಉಗ್ರವಾದಿ ಬುಡಕಟ್ಟು ಜನಾಂಗದವರು ಸುನ್ನಿ ಉಗ್ರಗಾಮಿ ಬುಡಕಟ್ಟು ಜನಾಂಗದವರು #ಶಿಯಾ ತುರಿ ಮತ್ತು ಬಂಗಾಶ್ ಬುಡಕಟ್ಟು ಜನಾಂಗದ 110 ನಾಗರಿಕರನ್ನು ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಬೆಂಕಿ ಹಚ್ಚಿದರು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಇಲ್ಲಿ ಖೈಬರ್ ಪಖ್ತುಂಖ್ವಾ ಎಂಬುದು ಸದ್ಯಯಕ್ಕೆ ಪಾಕಿಸ್ತಾನದ ಭೂಪ್ರದೇಶವಾಗಿದೆ. ಇನ್ನು ವಿಡಿಯೋದ ಒಂದು ಭಾಗ 2024ರದ್ದಾಗಿದೆ ಎಂಬುದು ನಮಗೆ ಈ ಪೋಸ್ಟ್ನಿಂದ ಸ್ಪಷ್ಟವಾಗಿದೆ.

ಇನ್ನು ಕೆಲವೊಂದು ಕ್ಲಿಪ್ಗಳನ್ನು ಉತ್ತರ ಐರ್ಲೆಂಡ್ನಲ್ಲಿರುವ ಕ್ಯಾಸಲ್ವೆಲ್ಲನ್ಸ್ಗೆ ಸಂಬಂಧಿಸಿದ್ದಾಗಿದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಪೂರಕ ಎಂಬಂತೆ ಘಟನೆಯ ಕುರಿತು 18 ಮಾರ್ಚ್ 2025ರಂದು ಬಿಬಿಸಿ ನಿರೂಪಕಿ ಬಾರ್ರಾ ಬೆಸ್ಟ್ ( @BarraBestPresenter ) ಅವರ ಫೇಸ್ಬುಕ್ ಪೋಸ್ಟ್ವೊಂದು ಕಂಡು ಬಂದಿದ್ದು, ಅದರಲ್ಲಿ ಅವರು “ಕೌಂಟಿ ಡೌನ್ನ ಮೌರ್ನ್ ಪ್ರದೇಶದಲ್ಲಿ, ಕ್ಯಾಸಲ್ವೆಲ್ಲನ್ನಲ್ಲಿರುವ ಇಂದು ರಾತ್ರಿ ಬೆಂಕಿ ಕಾಣಿಸಿಕೊಂಡಿದೆ..” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ. ಇದನ್ನು 18 ಮಾರ್ಚ್ 2025ರಂದು ಬಿಬಿಸಿ ಲೇಖನವಾಗಿ ಪ್ರಕಟಿಸಿರುವುದು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಆಗುತ್ತಿರುವ ವಿಡಿಯೋ ಎರಡು ವಿಡಿಯೋಗಳ ಕೊಲಾಜ್ ಎಂಬುದು ಸ್ಪಷ್ಟವಾಗಿದೆ ಮತ್ತು ಒಂದು ದೃಶ್ಯ ಪಾಕಿಸ್ತಾನದಲ್ಲಿ 2024ರಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದ್ದಾಗಿದ್ದರೆ ಮತ್ತೊಂದು ದೃಶ್ಯ 17 ಮಾರ್ಚ್ 2025 ರಂದು ಉತ್ತರ ಐರ್ಲೆಂಡ್ನಲ್ಲಿರುವ ಕ್ಯಾಸಲ್ವೆಲ್ಲನ್ಸ್ನಲ್ಲಿ ನಡೆದ ಬೆಂಕಿ ಅವಘಡಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಸಂಪೂರ್ಣವಾಗಿ ಸುಳ್ಳು ನಿರೂಪನೆಯಿಂದ ಕೂಡಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಾಕಿಸ್ತಾನ ಸೇನೆಯು ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

