ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಉತ್ತರ ಪ್ರದೇಶದ ಪೊಲೀಸರು ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಮೂವರು ವ್ಯಕ್ತಿಗಳ ಪಾದಕ್ಕೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವಿಡಿಯೋವನ್ನು ಕೆಲವರು “ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ಪೊಲೀಸರು ಶಿಕ್ಷೆ ನೀಡಿದ್ದಾರೆ” ಎಂದು ಹೇಳಿರುವುದರಿಂದ ಹಲವರು ಯೋಗಿ ಸರ್ಕಾರವನ್ನು ಹೊಗಳಿ ಪೋಸ್ಟ್ ಮಾಡುತ್ತಿದ್ದಾರೆ.
पाकिस्तान जिंदाबाद बोलने वालों का इलाज ऐसे होता है – यूपी पुलिस । 😄😝
🇮🇳 जय हिन्द 🙏 pic.twitter.com/oOqMnkWUqo— Pranav kr Mishra (@PranavM96738963) June 1, 2025
ಈ ವೈರಲ್ ವಿಡಿಯೋ ಜನಸಾಮಾನ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಾದ Xನಲ್ಲಿ. ಕೆಲವರು ಈ ವಿಡಿಯೋವನ್ನು ಭಾರತದ ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಭಾವನಾತ್ಮಕವಾಗಿ ಚಿತ್ರಿಸಿ, ಪಾಕಿಸ್ತಾನದ ಪರ ಘೋಷಣೆ ಕೂಗುವವರಿಗೆ “ಸರಿಯಾದ ಶಿಕ್ಷೆ” ನೀಡಲಾಗಿದೆ ಎಂದು ಹಂಚಿಕೊಂಡಿದ್ದಾರೆ. ಈ ತಪ್ಪು ಮಾಹಿತಿಯಿಂದಾಗಿ, ಜನರು ಈ ಘಟನೆಯನ್ನು ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ನಂಬಿದ್ದಾರೆ, ಇದು ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಹೊಸ ರೀತಿಯ ಚರ್ಚೆ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
पाकिस्तान जिंदाबाद बोलने वालों का इलाज ऐसे होता है – यूपी पुलिस । 😄😝
🇮🇳 जय हिन्द 🙏 pic.twitter.com/3MPEad8nGH— Gautam Rudra official (@BharatK00741911) June 2, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮೇ 27 ರಂದು ಟೈಮ್ಸ್ ನೌ ಫೇಸ್ಬುಕ್ನಲ್ಲಿ ಪ್ರಕಟಿಸಿದ ವೀಡಿಯೊವೊಂದು ಕಂಡು ಬಂದಿದೆ. ಇದರಲ್ಲಿ “ಆಂಧ್ರಪ್ರದೇಶದ ತೆನಾಲಿ ಹೆದ್ದಾರಿಯಲ್ಲಿ ಈ ಆತಂಕಕಾರಿ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ರಸ್ತೆಬದಿಯಲ್ಲಿ ವಿಕ್ಟರ್, ಬಾಬುಲಾಲ್ ಮತ್ತು ರಾಕೇಶ್ ಎಂಬ ಮೂವರು ವ್ಯಕ್ತಿಗಳನ್ನು ಕ್ರೂರವಾಗಿ ಥಳಿಸಿದ್ದಾರೆ. ಅಧಿಕಾರಿ ಲಾಠಿಯಿಂದ ಯುವಕರ ಪಾದಗಳಿಗೆ ಪ್ರಹಾರ ನಡೆಸಿರುವುದು ಕಂಡು ಬಂದಿದೆ” ಎಂದು ಉಲ್ಲೇಖಿಸಲಾಗಿದೆ.

“ಆಂಧ್ರ ಪೊಲೀಸರು ಸಾರ್ವಜನಿಕವಾಗಿ ಯುವಕರನ್ನ ಥಳಿಸಿರುವ ವೀಡಿಯೊ, ಜಗನ್ ಪಕ್ಷವು ಟಿಡಿಪಿ ಆಡಳಿತವನ್ನು ಟೀಕಿಸಿದೆ” ಎಂದು ಮೇ 27 ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ “ಕಾನ್ಸ್ಟೆಬಲ್ ಕಣ್ಣ ಚಿರಂಜೀವಿ ಅವರು ಈ ಹಿಂದೆ ತಮ್ಮ ಮೇಲೆ ಈ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ, ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ಆ ಸಮಯದಲ್ಲಿ ಈ ಮೂವರು ಗಾಂಜಾ ಸೇವಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇನ್ನು ಇದೇ ರೀತಿಯಾದ ಮಾಹಿತಿಯೊಂದಿಗೆ ಟೈಮ್ಸ್ ಆಫ್ ಇಂಡಿಯಾ , ನ್ಯೂಸ್ 18 ಮತ್ತು ಆಂಧ್ರ ಜ್ಯೋತಿ ಕೂಡ ಈ ಘಟನೆಯನ್ನು ಅದೇ ವಿವರಗಳೊಂದಿಗೆ ವರದಿ ಮಾಡಿದೆ. ಈ ಮೂಲಕ ವೈರಲ್ ವಿಡಿಯೋ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ನಡೆದ ಹಲ್ಲೆಯಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಉತ್ತರ ಪ್ರದೇಶದ ಪೊಲೀಸರು ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಆಂಧ್ರಪ್ರದೇಶದ್ದಾಗಿದ್ದು, ಪೊಲೀಸರು ಮೂವರು ಯುವಕರಿಗೆ ಗಂಜಾ ಸೇವನೆ ಮತ್ತು ಹಲ್ಲೆಯ ಆರೋಪವನ್ನು ಹೊರಿಸಿ ಅವರಿಗೆ ಲಾಠಿ ಪ್ರಹಾರವನ್ನು ನಡೆಸಲಾಗಿದೆ . ಹಾಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮಹಿಳೆಯನ್ನು ಬಲವಂತವಾಗಿ ಕಾರಿನೊಳಗೆ ಕರೆದೊಯ್ಯುವ ವೀಡಿಯೊ ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೆ

