ಇತ್ತೀಚೆಗಿನ ಕೆಲವು ದಿನಗಳಿಂದ ಸೌಜನ್ಯ ಪ್ರಕರಣ ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಇದರ ನಡುವೆ ಸೌಜನ್ಯ ಹೋರಾಟದ ವಿರುದ್ಧ ಇರುವ ಹಲವರು ಹೋರಾಟದ ದಿಕ್ಕು ತಪ್ಪಿಸಲು ಮತ್ತು ಪ್ರಭಾವಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ದಿಕ್ಕು ತಪ್ಪಿಸುವ ಹಾಗೂ ಸುಳ್ಳು ನಿರೂಪಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಲವೊಂದು ಮುಖ್ಯ ವಾಹಿನಿಯ ಮಾಧ್ಯಮಗಳು ಕೂಡ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯ ವರದಿಗಳನ್ನು ಮಾಡುತ್ತಿವೆ.

ಇದೀಗ ಇದಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಹೊರತಲ್ಲ ಎಂಬುದು ಸಾಬೀತಾಗಿದೆ. “ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: ‘ಜಸ್ಟೀಸ್ ಫಾರ್ ಸೌಜನ್ಯ’ ಫಲಕ ಪ್ರದರ್ಶನ ಕಾರಣವೇ?” ಎಂಬ ಪ್ರಶ್ನಾರ್ಥಕ ಚಿಹ್ನೆ ಬಳಸಿ ಇತ್ತೀಚೆಗೆ Justice for sowjanya ಫಲಕ ಪ್ರದರ್ಶಿಸಿದ ಕಾರಣ ಹುಸ್ಕೂರು ಮದ್ದೂರಮ್ಮ ಜಾತ್ರೆಯ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಜನತೆ ತಯಾರಿಸಿದ್ದ 100 ಅಡಿ ಎತ್ತರದ ತೇರು ನೆಲಕ್ಕೆ ಬಿದ್ದಿದೆ ಎಂಬ ಅರ್ಥ ಬರುವಂತೆ ವರದಿಯನ್ನು ಪ್ರಕಟಿಸಿದೆ. ತದ ನಂತರ ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ನಿನ್ನೆ ರಾತ್ರಿ 8:36 ಗಂಟೆಗೆ ಮತ್ತೊಮ್ಮೆ ವರದಿಯನ್ನು ಅಪ್ಡೇಟ್ ಮಾಡಿ ತೇಪೆ ಹಚ್ಚುವ ಕೆಲಸ ಮಾಡಿದೆ.
ಫ್ಯಾಕ್ಟ್ಚೆಕ್
ಸುವರ್ಣ ನ್ಯೂಸ್ ವರದಿಯನ್ನು ಗಮನಿಸಿದ ಹಲವು ಮಂದಿ ಸಾರ್ವಜನಿಕರು ಮೊದಲು ಇದನ್ನು ನಿಜವೆಂದು ನಂಬಿಕೊಂಡಿದ್ದರು, ಹಾಗಾಗಿ ಸಾಕಷ್ಟು ಮಂದಿ ವಿವಿಧ ರೀತಿಯಾದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ಹುಸ್ಕೂರು ಮದ್ದೂರಮ್ಮ ಜಾತ್ರೆ, ಜಸ್ಟೀಸ್ ಫಾರ್ ಸೌಜನ್ಯ, ಹುಸ್ಕೂರು ಮದ್ದೂರಮ್ಮ ಕುರ್ಚು (ತೇರು) ಎಂಬ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು, ಆದರೆ ನಮಗೆ ಬೇರೆ ಯಾವುದೇ ಮಾಧ್ಯಮ ಈ ರೀತಿಯ ವರದಿ ಮಾಡಿರುವುದು ಕಂಡು ಬಂದಿಲ್ಲ.

ಈ ಹಿನ್ನೆಲೆಯಲ್ಲಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಆಗ ನಮಗೆ 22 ಮಾರ್ಚ್ 2025ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ದೊಡ್ಡ ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ಕುರ್ಚು(ತೇರು) ನೆಲಕ್ಕೆ ಬಿದ್ದಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಎಲ್ಲಿಯೂ ಕೂಡ ಜಸ್ಟಿಸ್ ಫಾರ್ ಸೌಜನ್ಯ ಎಂಬ ಫಲಕದ ಕುರಿತು ಉಲ್ಲೇಖ ನಮಗೆ ಕಂಡು ಬಂದಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಸುವರ್ಣ ನ್ಯೂಸ್ನ ಫೋಟೋವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ ಫೇಸ್ಬುಕ್ನಲ್ಲಿ ಕರ್ನಾಟಕ ವಾಣಿ ಎಂಬ ಖಾತೆಯಲ್ಲಿ “ಜಸ್ಟೀಸ್ ಫಾರ್ ಸೌಜನ್ಯ ಫಲಕ ಗಟ್ಟಹಳ್ಳಿ ರಥ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಇನ್ನು ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಥದಲ್ಲಿ ಕೂಡ ಗಟ್ಟಹಳ್ಳಿ ಎಂದು ಬರೆದಿರುವುದು ಕೂಡ ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಕನ್ನಡದ ಥರ್ಡ್ ಐ ಯೂಟ್ಯುಬ್ ಚಾನಲ್ನ ಮುಖ್ಯಸ್ಥರು ಹಾಗೂ ಪತ್ರಕರ್ತರಾದ ಸಬ್ರಮಣ್ಯ ಎಸ್ ಹಂಡಿಗೆ ಅವರು ವಿಡಿಯೋ ವರದಿಯೊಂದನ್ನು ಮಾಡಿದ್ದು ಅದರಲ್ಲಿ ಗಟ್ಟಹಳ್ಳಿ ಗ್ರಾಮಸ್ಥರನ್ನು ಮಾತನಾಡಿಸಿದ್ದಾರೆ, ಇದರಲ್ಲಿ ಗ್ರಾಮಸ್ಥ ಶ್ರೀನಿವಾಸ್ ತಮ್ಮ ಗ್ರಾಮ ಗಟ್ಟಹಳ್ಳಿಯ ರಥದಲ್ಲಿ ಜಸ್ಟೀಸ್ ಫಾರ್ ಸೌಜನ್ಯ ಫಲಕವನ್ನು ಪ್ರದರ್ಶಿಸಲಾಗಿದೆ. ನಮ್ಮ ತೇರು ನೆಲಕ್ಕೆ ಬಿದ್ದಿಲ್ಲ. ನೆಲಕ್ಕೆ ಬಿದ್ದಿರುವುದು ದೊಡ್ಡ ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ತೇರು ಎಂಬುದನ್ನು ಸ್ಪಷ್ಟ ಪಡಿಸಿರುವುದು ಕೂಡ ಕಂಡು ಬಂದಿದೆ. ಇದರ ಜೊತೆಗೆ ಸೌಜನ್ಯ ಪ್ರಕರಣದ ಕುರಿತು ಎದ್ದಿರುವ ಹಲವು ಪ್ರಶ್ನೆಗಳಿಗೆ ಕೂಡ ಸುಬ್ರಮಣ್ಯ ಎಸ್ ಹಂಡಿಗೆ ಅವರು ಸ್ಪಷ್ಟ ಉತ್ತರವನ್ನು ನೀಡಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡದ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಶ್ನಾರ್ಥಕವಾಗಿ ಜಸ್ಟಿಸ್ ಫಾರ್ ಸೌಜನ್ಯ ಎಂಬ ಫಲಕ ಪ್ರದರ್ಶಿಸಿದ್ದರಿಂದಲೇ ಹುಸ್ಕೂರು ಮದ್ದೂರಮ್ಮ ಜಾತ್ರೆಯ ತೇರು ನೆಲಕ್ಕೆ ಬಿದ್ದಿದೆ ಎಂದು ಬಿಂಬಿಸಲು ಪ್ರಯತ್ನಿಸಿರುವುದು ಸಾಬೀತಾಗಿದೆ. ತದ ನಂತರ ಸುವರ್ಣ ನ್ಯೂಸ್ ವರದಿಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸುದ್ದಿಯನ್ನು ಮತ್ತೊಮ್ಮೆ ಎಡಿಟ್ ಮಾಡಿ ಅಪ್ಡೇಟ್ ಮಾಡಿರುವುದು ಕಂಡುಬಂದಿದೆ. ಹಾಗಾಗಿ ಇಂತಹ ಸುಳ್ಳು ಸುವರ್ಣ ನ್ಯೂಸ್ ವರದಿಗಳ ಬಗ್ಗೆ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಭೂಮಿಗೆ ಸುರಕ್ಷಿತವಾಗಿ ಮರಳಿದ ಸುನಿತಾ ವಿಲಿಯಮ್ಸ್ ವಿಡಿಯೋ ಎಂದು 2024ರ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

