ಭಾರತೀಯ ಸಶಸ್ತ್ರ ಪಡೆಗಳು ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂದೂರ್’ ಅನ್ನು ಪ್ರಾರಂಭಿಸಿದವು. ಭಾರತೀಯ ವಾಯುಪಡೆ (ಐಎಎಫ್) ಸಿಯಾಲ್ಕೋಟ್ನ ಮೆಹಮೂನಾ ಜೋಯಾ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ನಿಖರವಾದ ದಾಳಿಗಳನ್ನು ನಡೆಸಿತು. ಈ ಸಂದರ್ಭದಲ್ಲಿ, IAF ನಡೆಸಿದ ದಾಳಿಯನ್ನು ತೋರಿಸಲು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವೀಡಿಯೊದಲ್ಲಿ, ರಸ್ತೆಯಲ್ಲಿ ಸ್ಫೋಟ ಸಂಭವಿಸುತ್ತಿರುವುದನ್ನು ಮತ್ತು ಟ್ರಕ್ಗಳಿಂದ ಬೆಂಕಿ ಹೊರಹೊಮ್ಮುತ್ತಿರುವುದನ್ನು ನೋಡಬಹುದಾಗಿದೆ. “ಸೀಸನ್ 1 – ಸಂಚಿಕೆ 2 ಪ್ರಾರಂಭವಾಗುತ್ತದೆ. ಸಿಯಾಲ್ಕೋಟ್ ಉರಿಯುತ್ತಿದೆ” ಎಂದು ಬರೆದುಕೊಂಡು ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ವಿಡಿಯೋ ಎಂದು ಹಲವರು ಉಲ್ಲೇಖಿಸಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Poonch ka badla Sialkot se
Jai Hind 🚩
[Unconfirmed visual] pic.twitter.com/EHYUGcUQMr— Komolika (@Thatdammgurl) May 7, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮಾರ್ಚ್ 25 ರಂದು ಗಲ್ಫ್ ಡಿಜಿಟಲ್ ನ್ಯೂಸ್ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ ಅದೇ ವೀಡಿಯೊ ಕಂಡು ಬಂದಿದೆ. “ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ಗ್ಯಾಸ್ ಸಿಲಿಂಡರ್ಗಳು ಸ್ಪೋಟಗೊಂಡಿವೆ” ಎಂದು ವರದಿ ಪ್ರಕಟವಾಗಿರುವುದು ಕಂಡು ಬಂದಿದೆ.

ಮಾರ್ಚ್ 24 ರಂದು ಮುಂಬೈನ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಟ್ರಕ್ನಲ್ಲಿದ್ದ ಹಲವಾರು ಅಡುಗೆ ಅನಿಲ ಸಿಲಿಂಡರ್ಗಳು ಬೆಂಕಿಗೆ ಆಹುತಿಯಾಗಿ ಸ್ಫೋಟಗೊಂಡಿವೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಮಾರ್ಚ್ 26 ರಂದು ಟೈಮ್ಸ್ ಆಫ್ ಇಂಡಿಯಾ ಈ ಘಟನೆಯ ಕುರಿತು “ವೀಕ್ಷಿಸಿ: ಟ್ರಕ್ನಲ್ಲಿ 20+ ಎಲ್ಪಿಜಿ ಸಿಲಿಂಡರ್ಗಳು ಸ್ಫೋಟಗೊಂಡಾಗ ಮುಂಬೈನ ಧಾರಾವಿ ನಡುಗಿತು” ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿರುವುದು ಕೂಡ ಕಂಡು ಬಂದಿದೆ. ಇದೇ ರೀತಿಯಾಗಿ ಹಲವು ಮಾಧ್ಯಮಗಳು ವರದಿ ಮಾಡಿರುವುದು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ವೈರಲ್ ವಿಡಿಯೋಗೂ ಭಾರತ ಮತ್ತು ಪಾಕಿಸ್ತಾನದ ಸಂಘರ್ಷಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ಈ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಾಕಿಸ್ತಾನಿಗಳು ಹಣ ಹಿಂಪಡೆಯಲು ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತಿದ್ದಾರೆ ಎಂದು ಅಫ್ಘಾನಿಸ್ತಾನದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

