ಹರಿಯಾಣದ ಗುರುಗ್ರಾಮದಲ್ಲಿ ನಾಲ್ವರು ಮುಸುಕುಧಾರಿಗಳು ಬಂದೂಕು ಹಿಡಿದುಕೊಂಡು ಕಾರಿನಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಹರಿಯಾಣದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಅಲ್ಲಿನ ಭದ್ರತಾ ವ್ಯವಸ್ಥೆ ಇಷ್ಟೊಂದು ಕಳಪೆ ಮಟ್ಟಕ್ಕೆ ಇಳಿದಿದ್ದು ಯಾವಾಗ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏನು ಮಾಡುತ್ತಿವೆ ಎಂದು ಬರೆದುಕೊಂಡು ಹಲವರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಕೂಡ ಆಗಿದೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಕೂಡ ನಾಲ್ವರು ಮುಸುಕುಧಾರಿಗಳು ಕೈಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಕಾರಿನಲ್ಲಿ ಇರುವುದನ್ನು ಕಾಣಬಹುದಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡು ಹರಿಯಾಣದ ಸರ್ಕಾರದ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ವಾಹನ ಸಂಖ್ಯೆ ಮತ್ತು ಸ್ಥಳವನ್ನು ಪರಿಶೀಳನೆಗೆ ಒಳ ಪಡಿಸಿದೆವು. ಈ ವೇಳೆ ನಮಗೆ ವಾಹನದ ನೊಂದಣಿ ಅಕ್ಷರಗಳು ವಾಹನ ಹರಿಯಾಣಕ್ಕೆ ಸೇರಿವೆ ಎಂಬುದನ್ನು ಖಚಿತ ಪಡಿಸಿದವು. ಆದರೆ ವಿಡಿಯೋವಿನ ಕೆಲವು ಭಾಗಗಳಲ್ಲಿ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಬರೆದಿದ್ದ ಸೂಚನಾ ಫಲಕಗಳು ಕಂಡು ಬಂದವು.


ಇದರ ಆಧಾರದ ಮೇಲೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 3 ಮಾರ್ಚ್ 2025ರಂದು Instagram ಬಳಕೆದಾರ sh.raddha_2021 ಅವರ ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಲಾದ ಮೂಲ ವಿಡಿಯೋವಿನ ಒಂದು ಭಾಗ ನಮಗೆ ಕಂಡು ಬಂದಿದೆ. ಇದು NSG ಯ ಅಣಕು ಕವಾಯತಿನ ವೀಡಿಯೊ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿರುವುದು ನಮಗೆ ಸ್ಪಷ್ಟವಾಗಿ ಕಂಡು ಬಂದಿದೆ.

ಮಾರ್ಚ್ 3 ರಂದು VIT Vlogs ಯೂಟ್ಯೂಬ್ ಚಾನೆಲ್ನಲ್ಲಿ ಒಂದು ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದ್ದು, ಇದು VIT ವೆಲ್ಲೂರಿನಲ್ಲಿ ನಡೆದ NSG ಅಣಕು ಡ್ರಿಲ್ನದ್ದಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ, Instagram ಬಳಕೆದಾರ sh.raddha_2021 ಅವರು ಹಂಚಿಕೊಂಡ ವೀಡಿಯೊದ ಒಂದು ಭಾಗವನ್ನು ನೋಡಬಹುದು.
ಮಾರ್ಚ್ 2 ರಂದು ದಿ ಹಿಂದೂದಲ್ಲಿ ಪ್ರಕಟವಾದ ವರದಿಯ ಪ್ರಕಾರ , ಮಾರ್ಚ್ 2 ರಂದು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ) ಕಮಾಂಡೋಗಳು ವಿಐಟಿ ಆವರಣದಲ್ಲಿ ಅಣಕು ಕವಾಯತು ನಡೆಸಿದರು. ಈ ಕಾರ್ಯಾಚರಣೆಯಲ್ಲಿ 50 ಎನ್ಎಸ್ಜಿ ಕಮಾಂಡೋಗಳು ಸೇರಿದಂತೆ ಸುಮಾರು 250 ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು. ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

23 ಜುಲೈ, 2022 ರಂದು, ವಿಐಟಿ ವೆಲ್ಲೂರು ಕ್ಯಾಂಪಸ್ನ ಹೊರಗಿನ ವೀಡಿಯೊವನ್ನು ಸಭ್ಯಜೀತ್ ಸಿಂಗ್ ಗ್ರೆವಾಲ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ, VIT ಎಂದು ಬರೆದಿರುವ ಕಲ್ಲು ಮತ್ತು ರಸ್ತೆಯಲ್ಲಿರುವ ಏರ್ಟೆಲ್ ಅಂಗಡಿಯನ್ನು ಕಾಣಬಹುದು, ಅದು ವೈರಲ್ ವೈರಲ್ ವಿಡಿಯೋದಲ್ಲಿ ಗೋಚರಿಸುತ್ತದೆ.


ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಹರಿಯಾಣದ ಗುರುಗ್ರಾಮದಲ್ಲಿ ನಾಲ್ವರು ಉಗ್ರರು ಬಂದೂಕು ಹಿಡಿದುಕೊಂಡು ವಾಹನದಲ್ಲಿ ಓಡಾಡಿದ್ದಾರೆ ಎಂಬುದು ಸುಳ್ಳು. ಇದು ತಮಿಳುನಾಡಿನಲ್ಲಿ NSG ಕಮಾಂಡೋ ಪಡೆ ನಡೆಸಿದೆ ಅಣಕು ಕವಾಯತ್ತಿನಿ ವಿಡಿಯೋವಾಗಿದೆ. ಹಾಗಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರೋಲ್ಸ್ ರಾಯ್ಸ್ ಕಾರಿನ ಮೇಲೆ ಬೃಹತ್ ಬಂಡೆಯನ್ನು ಹಾಕಿದರೂ ಹಾನಿಯಾಗುವುದಿಲ್ಲ ಎಂದು AI ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

