ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಭಾರತೀಯ ಸೈನಿಕರು ತಮ್ಮ ಸತ್ತವರ ಮೃತ ದೇಹವನ್ನು ಮರಳಿ ಪಡೆಯಲು ಪಾಕಿಸ್ತಾನದ ಎದುರು ಬಿಳಿ ಧ್ವಜವನ್ನು ಬೀಸಿದ್ದಾರೆ ಎಂದು ಬರೆದುಕೊಂಡು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಭಾರತೀಯ ಸೈನಿಕರು ತಮ್ಮನ್ನು ರಕ್ಷಿಸಲು ಪಾಕಿಸ್ತಾನದ ಬಳಿ ಶರಣಾಗುವ ಸಂಕೇತವನ್ನು ತೋರಿಸಿದ್ದಾರೆ ಎಂದು ಕೆಲ ವಿದೇಶಿಗರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬರೆದುಕೊಂಡಿವೆ.

ವೈರಲ್ ವಿಡಿಯೋದಲ್ಲಿ ಕೂಡ ಬಿಳಿ ಬಣ್ಣದ ಧ್ವಜವನ್ನು ಕೆಲ ಸೈನಿಕರು ಬೀಸುತ್ತಿರುವಂತೆ ಕಂಡು ಬಂದಿದೆ. ಇದನ್ನು ನೋಡಿದ ಸಾಕಷ್ಟು ವಿದೇಶಿಗರು ಇದನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡು ಭಾರತ ವಿರೋಧಿ ಬರಹಗಳನ್ನು ಬರೆದುಕೊಳ್ಳುತ್ತಿದ್ದಾರೆ. ಜೊತೆಗೆ ಭಾರತೀಯ ಸೇನಾ ಶಕ್ತಿಯ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಈ ವೈರಲ್ ವಿಡಿಯೋ 2019 ಸಪ್ಟೆಂಬರ್ ತಿಂಗಳಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಇವೆ ಎಂಬುದು ತಿಳಿದು ಬಂದಿದೆ. ಈ ವಿಡಿಯೋ ಕುರಿತು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಅದರ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಾಜಿಪಿರ್ ಸೆಕ್ಟರ್ ನಲ್ಲಿ ಗಡಿಯಾಚೆಗೆ ಪಾಕಿಸ್ತಾನ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತದ ಸೇನೆಯ ಪ್ರತಿದಾಳಿಯನ್ನು ಕೂಡ ನಡೆಸಿತ್ತು, ಈ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಸೇನೆಯ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದರು, ಅವರ ಶವಗಳನ್ನು ಮರಳಿ ಪಡೆಯಲು ಪಾಕಿಸ್ತಾನದ ಸೇನೆ ಬಿಳಿ ಧ್ವಜವನ್ನು ಪ್ರದರ್ಶಿಸಿ, ಭಾರತೀಯ ಸೇನೆಯ ಬಳಿ ಗುಂಡು ಹಾರಿಸದಂತೆ ಮನವಿ ಮಾಡಿಕೊಂಡಿತ್ತು ಎಂದು ವರದಿಯಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 14 ಸೆಪ್ಟೆಂಬರ್ 2019 ರಂದು ANI ಕೂಡ ಈ ಬಗ್ಗೆ ವರದಿ ಮಾಡಿರುವುದು ಕಂಡು ಬಂದಿದೆ. ಇದರಲ್ಲಿ ಪಾಕಿಸ್ತಾನದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ದಾಳಿ ನಡೆಸಿದ್ದು ಪಾಕಿಸ್ತಾನದ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಪಾಕಿಸ್ತಾನಿ ಸೇನೆಯು ತನ್ನ ಸೈನಿಕರ ಶವಗಳನ್ನು ಮರಳಿ ಪಡೆಯಲು ಬಿಳಿ ದ್ವಜವನ್ನು ಪ್ರದರ್ಶಿಸಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪಾಕಿಸ್ತಾನದ ಸೇನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಭಾರತೀಯ ಸೇನೆ ಬಿಳಿ ಬಣ್ಣದ ಧ್ವಜವನ್ನು ಪ್ರದರ್ಶಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವರದಿಗಳ ಪ್ರಕಾರ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿ ಮಾಡಿದ್ದು, ಭಾರತ ಸೇನೆ ಪ್ರತಿದಾಳಿ ಪ್ರತಿದಾಳಿಯ ವೇಳೆ ಸಾವನ್ನಪ್ಪಿದ್ದ ಇಬ್ಬರು ಪಾಕ್ ಸೈನಿರ ಮೃತದೇಹ ಮರಳಿ ಪಡೆಯಲು ಪಾಕಿಸ್ತಾನ ಸೇನೆ ಭಾರತದ ಸೇನೆಗೆ ಬಿಳಿ ಬಣ್ಣದ ಬಾವುಟವನ್ನು ಪ್ರದರ್ಶಿಸಿದೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿರುವುದು ಸ್ಪಷ್ಟವಾಗಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
ಇದನ್ನೂ ಓದಿ : Fact Check | ಕಟೀಲು ದೇವಾಸ್ಥಾನದ ‘ತೂಟೆದಾರ’ ಆಚರಣೆಯ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೆ

