ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಸಮುದ್ರದಿಂದ ದೊಡ್ಡ ಧನಸ್ಸನ್ನು ಎಳೆಯಲಾಗುತ್ತಿರುವ ದೃಶ್ಯವಿದೆ. ಈ ವೀಡಿಯೊವನ್ನು ಶ್ರೀ ರಾಮನ ಧನಸ್ಸು ಪತ್ತೆಯಾಗಿದೆ. ರಾಮಾಯಣ ಕಾಲದಿಂದ ಸಮುದ್ರದಲ್ಲಿ ಸೇರಿತ್ತು ಎಂದು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರ ಪ್ಲಾಟ್ಫಾರ್ಮ್ಗಳಲ್ಲಿ “ಶ್ರೀ ರಾಮನ ದೈವಿಕ ಆಯುಧ ಸಮುದ್ರದಲ್ಲಿ ಪತ್ತೆ” ಎಂಬ ಶೀರ್ಷಿಕೆಯೊಂದಿಗೆ ವ್ಯಾಪಕವಾಗಿ ಶೇರ್ ಮಾಡಲಾಗಿದೆ.
भगवान् राम चंद जी का धनुष ।।समुद्र से मिला pic.twitter.com/Vgrv8W2Olz
— 🥀🌹N𝖆𝖓d𝖚 H𝔦𝔫d𝔲🌹🥀 (@nair_nandu08) May 31, 2025
ಈ ವೈರಲ್ ವೀಡಿಯೊ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಬರಹಗಳೊಂದಿಗೆ ಕೂಡ ಹಂಚಿಕೊಳ್ಳಲಾಗುತ್ತಿದೆ, ಇನ್ನೂ ಕೆಲವರು ಶ್ರೀ ರಾಮನ ಧನಸ್ಸಿನ ಪೌರಾಣಿಕ ಮಹತ್ವದ ಕುರಿತು ಹೊಸ ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿದ್ದಾರೆ, ಸಾಕಷ್ಟು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊವನ್ನು ಶೇರ್ ಮಾಡುವವರು ಇದನ್ನು “ರಾಮಾಯಣ ಕಾಲದ ಸಾಕ್ಷ್ಯ” ಎಂದು ಕರೆದಿದ್ದಾರೆ, ಹೀಗೆ ವ್ಯಾಪಕವಾಗಿ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋ ಕುರಿತು ನಾವು ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು Google ನಲ್ಲಿ ಹುಡುಕಿದೆವು. ಆದರೆ ವೈರಲ್ ವಿಡಿಯೋಗೆ ಸಂಬಂಧಿಸಿದ ಯಾವುದೇ ಸುದ್ದಿ ವರದಿ ನಮಗೆ ಸಿಗಲಿಲ್ಲ. ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಧನುಸ್ಸಿಗೆ ಕಾವಲು ಕಾಯುತ್ತಿದ್ದ ಅನೇಕ ಪೊಲೀಸರ ದೈಹಿಕ ಚಲನೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. ಹೀಗಾಗಿ ಈ ವೀಡಿಯೊವನ್ನು AI ಸಹಾಯದಿಂದ ರಚಿಸಲಾಗಿದೆಯೇ ಎಂಬ ಅನುಮಾನವನ್ನು ನಮಗೆ ಮೂಡಿಸಿತು.

ಹೀಗಾಗಿ ನಾವು AI ವಿಡಿಯೋ ಪತ್ತೆ ಹಚ್ಚುವ ವೆಬ್ಸೈಟ್ ಕ್ಯಾಂಟಿಲಕ್ಸ್ ಸಹಾಯದಿಂದ ವೀಡಿಯೊವನ್ನು ಪರಿಶೀಲಿಸಿದ್ದೇವೆ. ಈ ವೆಬ್ಸೈಟ್ ವೀಡಿಯೊವನ್ನು AI ನಿಂದ ಮಾಡಲಾಗಿರುವ ಸಂಭವನೀಯತೆಯನ್ನು ಶೇಕಡಾ 80 ರವರೆಗೆ ಅಂದಾಜಿಸಿದೆ. ಈ ಫಲಿತಾಂಶದಲ್ಲಿ ವೈರಲ್ ವಿಡಿಯೋ ಬಹುತೇಕ AI ನಿಂದ ನಿರ್ಮಿಸಲಾಗಿದೆ ಎಂಬುದು ನಮಗೆ ಖಚಿತವಾಗಿತ್ತು.

ಆದರೂ ಈ ಬಗೆಗಿನ ಇನ್ನಷ್ಟು ಪುರಾವೆಗಾಗಿ ನಾವು ಇನ್ನೂ ಹಲವು AI ವಿಡಿಯೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಬಹುತೇಕ ಎಲ್ಲಾ AI ಪತ್ತೆ ಹಚ್ಚುವ ವೆಬ್ಸೈಟ್ಗಳು ವೈರಲ್ ವಿಡಿಯೋ AI ನಿಂದಲೇ ನಿರ್ಮಾಣಗೊಂಡಿವೆ ಎಂಬುದನ್ನು ನಮಗೆ ಖಚಿತ ಪಡಿಸಿವೆ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಕೃತ ಬುದ್ಧಿಮತ್ತೆಯಿಂದ ನಿರ್ಮಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಶ್ರೀರಾಮನ ಧನಸ್ಸು ಸಮುದ್ರದಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು. ವೈರಲ್ ವಿಡಿಯೋವನ್ನು AI ನಿಂದ ನಿರ್ಮಾಣ ಮಾಡಲಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇತ್ತೀಚೆಗೆ ಕೇರಳದ ಕಾಲೇಜು ಪ್ರಮುಖ ಕಾರ್ಯಕ್ರಮಗಳಿಗೆ ಮೊದಲು ಕುರಾನ್ ಓದುವುದನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು

