ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಅದರಲ್ಲಿ ನೀಲಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಮನೆಯಿಂದ ಓಡಿಹೋಗಲು ಯತ್ನಿಸುತ್ತಾನೆ. ಆದರೆ, ಪೊಲೀಸರು ಆತನ ಕಾಲರ್ ಹಿಡಿದು ಸೋಫಾದ ಮೇಲೆ ಕೂರಿಸುತ್ತಾರೆ. ವೀಡಿಯೊದಲ್ಲಿ ಪೊಲೀಸರ ಜೊತೆಗೆ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಮತ್ತು ನೀಲಿ ಕುರ್ತಾ ಧರಿಸಿದ ಮಹಿಳೆಯೂ ಕಾಣಿಸುತ್ತಾರೆ. ಹಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ಬಗ್ಗೆ ಹಲವರು ವಿವಿಧ ರೀತಿಯಲ್ಲಿ ಬರೆದುಕೊಂಡು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದು, ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹಿಂದೂ-ಮುಸ್ಲಿಂ ಜೋಡಿ. ತನ್ನ ಹೆಸರು “ಗೌರವ್” ಎಂದು ಹೇಳಿ, ಹಿಂದೂ ಯುವತಿಯೊಡನೆ ಪ್ರೇಮ ವ್ಯವಹಾರ ಮಾಡುತ್ತಿದ್ದ ಸಲೀಂ ಎಂಬ ಮುಸ್ಲಿಂ ಯುವಕ ಪೊಲೀಸರ ಎದುರು ಸತ್ಯ ಗೊತ್ತಾದಾಗ, ಓಡಲು ಯತ್ನಿಸಿದ. ಮೋಸ ತಿಳಿದ ಹಿಂದೂ ಯುವತಿಗೆ ಆಶ್ಚರ್ಯ. ಈ ಘಟನೆ “ಸತ್ಯದ ಕನ್ನಡಿ”. ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯಲ್ಲಿ ಸಾಕಷ್ಟು ಮಂದಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಹಾಗೂ ಪೋಸ್ಟ್‌ಗಳ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ನಿಜಾಂಶವನ್ನು ಪತ್ತೆ ಹಚ್ಚಲು ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಜುಲೈ 28, 2025 ರಂದು ಮಾಂಟಿ ದೀಪಕ್ ಶರ್ಮಾ ಎಂಬಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿ ಕಂಡುಬಂದಿದೆ. ಇದನ್ನು ಬೇರೆ ಆಯಾಮದಿಂದ ಚಿತ್ರಿಕರಿಸಿರುವುದು ನಮಗೆ ಕಂಡು ಬಂದಿದೆ. ಈ ವೀಡಿಯೊದ 2ನೇ ಸೆಕೆಂಡ್ನಲ್ಲಿ ವಿಡಿಯೋ ಬಗ್ಗೆ ಸೂಚನೆಯನ್ನು ನೀಡಲಾಗಿದ್ದು, ಅದರಲ್ಲಿ “ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ನಿರ್ಮಿಸಿದ್ದಾರೆ. ಈ ವಿಡಿಯೋ ಕಾಲ್ಪನಿಕವಾಗಿದ್ದು, ಈ ವೀಡಿಯೊ ಮೂಲಕ ಯಾವುದೇ ರೀತಿಯಲ್ಲಿ ಯಾವುದೇ ಸಮುದಾಯ, ಅಥವಾ ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ. ಈ ವಿಡಿಯೋವನ್ನು ಮನೋರಂಜನೆ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇದೇ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿ Monty Deepak Sharma ಎಂಬ ಯೂಟ್ಯುಬ್‌ನಲ್ಲಿ ಕೂಡ ಕಂಡು ಬಂದಿದೆ. ಮಾಂಟಿ ದೀಪಕ್ ಶರ್ಮಾ ತನ್ನನ್ನು ತಾನು ಡಿಜಿಟಲ್ ಕ್ರಿಯೇಟರ್ ಎಂದು ಕರೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಹಲವು ವಿಡಿಯೋಗಳಲ್ಲಿ ಕೂಡ ಆತ ನಟಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಪೂರ್ವ ನಿಯೋಜಿತವಾದ ವಿಡಿಯೋವಾಗಿದೆ. ಹಾಗಾಗಿ ವೈರಲ್ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಸಲೀಂ ಎಂಬ ವ್ಯಕ್ತಿ ಹಿಂದೂ ವ್ಯಕ್ತಿಯಂತೆ ನಟಿಸಿ ಹಿಂದೂ ಯುವತಿಯನ್ನು ಪ್ರೀತಿಸಿ, ಬಳಿಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಎಂಬ ಹೇಳಿಕೆ ಸುಳ್ಳು ಸೃಷ್ಠಿಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ. ವೈರಲ್ ವಿಡಿಯೋ ಕಿರುಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | “ನಾನು ರೈತನ ಮಗ, ಯಾರಿಗೂ ಹೆದರುವುದಿಲ್ಲ” ಎಂದು ಜಗದೀಪ್ ಧನಕರ್ ಇತ್ತೀಚೆಗೆ ಹೇಳಿದ್ದಾರೆ ಎಂಬುದು ಸುಳ್ಳು
