ಆಪರೇಷನ್ ಅಖಲ್ ಎಂಬುದು ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಮಹತ್ವದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ದಟ್ಟವಾದ ಅಖಲ್ ಕಾಡುಗಳಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆಗಸ್ಟ್ 4, 2025 ರ ಹೊತ್ತಿಗೆ ಅದು ನಾಲ್ಕನೇ ದಿನಕ್ಕೆ ಕಾಲಿಟ್ಟಿತ್ತು. ಕಾರ್ಯಾಚರಣೆಯ ಮಧ್ಯೆ ಅಂತರ್ಜಾಲದಲ್ಲಿ ಒಂದು ಹೇಳಿಕೆ ವೈರಲ್ ಆಗುತ್ತಿದೆ. X ನಲ್ಲಿ ಪಾಕಿಸ್ತಾನ ಮೂಲದ ಖಾತೆ ‘ಟ್ಯಾಕ್ಟಿಕಲ್ ಟ್ರಿಬನ್’, “4 ದಿನಗಳ ಕುಲ್ಗಮ್ ಎನ್‌ಕೌಂಟರ್ ನಡೆಯುತ್ತಿದೆ, 3 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯು ಗನ್ಶಿಪ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ” ಎಂದು ಹೇಳಿಕೊಂಡಿದೆ.
ಇದೇ ರೀತಿಯಲ್ಲಿ “ಕುಲ್ಗಾಮ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರೊಂದಿಗಿನ ಎನ್‌ಕೌಂಟರ್‌ನಲ್ಲಿ 3 ಭಾರತೀಯ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 4 ಮಂದಿ ಗಾಯಗೊಂಡಿದ್ದಾರೆ” ಎಂದು X ‘Himat75’ ಎಂಬ ಮತ್ತೊಂದು ಪಾಕಿಸ್ತಾನಿ ಖಾತೆ ಪೋಸ್ಟ್ ಮಾಡಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ಪೋಸ್ಟ್‌ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳು ವರದಿ ಮಾಡದೇ ಇರುವುದು ಕಂಡು ಬಂದಿದೆ. ಒಂದು ಘಟನೆ ನಿಜವಾಗಿದ್ದರೆ, ಬಹುತೇಕ ಮಾಧ್ಯಮಗಳು ಈ ಕುರಿತು ವರದಿಯನ್ನು ಪ್ರಕಟಿಸುತ್ತಿದ್ದವು, ಹೀಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ನಾವು ಆಪರೇಷನ್ ಅಖಲ್ ಕುರಿತು ಹಲವು ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆವು, ಈ ವೇಳೆ ನಮಗೆ ಇಂಡಿಯಾ ಟುಡೇ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಲಾಗಿರುವುದು ಕಂಡು ಬಂದಿದೆ. ವೀಡಿಯೊದ ಶೀರ್ಷಿಕೆಯಲ್ಲಿ “ಆಪರೇಷನ್ ಅಖಾಲ್ ದಿನ 4: ಕುಲ್ಗಮ್ ಫಾರೆಸ್ಟ್‌ನಲ್ಲಿ 3 ಭಯೋತ್ಪಾದಕರ ಹತ್ಯೆ, 4 ಸೈನಿಕರಿಗೆ ಗಾಯ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ವರದಿಯಲ್ಲಿ “ಶುಕ್ರವಾರ (ಆಗಸ್ಟ್ 1) ಸಂಜೆ ಪ್ರಾರಂಭವಾದ ಕಾರ್ಯಚರಣೆಯಲ್ಲಿ ಮೂವರು ಭಯೋತ್ಪಾದಕರ ಸಾವಿಗೆ ಮತ್ತು ನಾಲ್ವರು ಸೈನಿಕರಿಗೆ ಗಾಯಗಳಾಗಲು ಕಾರಣವಾಗಿದೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಆಪರೇಷನ್ ಅಖಲ್‌ನಲ್ಲಿ ನಾಲ್ವರು ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಆಗುತ್ತಿರುವ ಪೋಸ್ಟ್ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮುಸ್ಲಿಂ ಯುವಕ ತನ್ನ ಹಿಂದೂ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ