ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಒಬ್ಬ ಹುಡುಗಿಗೆ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡುಬರುತ್ತದೆ. ವೀಡಿಯೊದಲ್ಲಿ, ಆ ಹುಡುಗಿ ಹಿಂದೂ ಎಂದು ಹೇಳಲಾಗಿದ್ದು, ಅವಳೊಂದಿಗೆ ಒರಟಾಗಿ ವರ್ತಿಸುತ್ತಿರುವ ವ್ಯಕ್ತಿ ತನ್ನನ್ನು ಆಕೆಯ ಮುಸ್ಲಿಂ ಗೆಳೆಯ ಎಂದು ಹೇಳಿಕೊಳ್ಳುವುದು ಕಂಡು ಬಂದಿದೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, “ಆಕೆಯ ಜಿಹಾದಿ ಗೆಳೆಯ ಆಕೆಯನ್ನು ನಾಯಿಯಂತೆ ಹೊಡೆಯುತ್ತಿದ್ದಾನೆ. ಆಕೆಯ ಕುಟುಂಬದವರು ಆಕೆಯನ್ನು ಗದರಿಸಿದಾಗ, ಆಕೆ ಅವರಿಗೆ ಬೆದರಿಕೆ ಹಾಕುತ್ತಿದ್ದಳು” ಎಂದು ಬರೆದಿದ್ದಾರೆ. ಇದನ್ನು ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಕೂಡ ಕಿಡಿ ಕಾರುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದ್ದು, ಈ ಸಂದರ್ಭದಲ್ಲಿ ಪೋಸ್ಟ್‌ವೊಂದರ ಕಮೆಂಟ್‌ನಲ್ಲಿ “ಇದು ಸುಜೀತ್ ಪಾಂಡೆ ಮತ್ತು ಅಂಕಿತಾ ಕರೋಟಿಯಿಂದ ಯೋಜಿತವಾಗಿ ತಯಾರಿಸಲಾದ ವೀಡಿಯೊ.” ಎಂದು ಉಲ್ಲೇಖಿಸಲಾಗಿರುವುದು ಕಂಡು ಬಂದಿದೆ.
स्क्रिप्टेड वीडियो है, सुजीत पांडे और अंकिता करोतिया का।
— Rc Pandey (@rcpandey_skn) July 31, 2025
ಇದರ ಮಾಹಿತಿಯನ್ನು ಅನುಸರಿಸಿ ನಾವು ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಈ ವೇಳೆ ನಮಗೆ ಯೂಟ್ಯುಬ್ ಚಾನಲ್‌ನ ಲಿಂಕ್ ವೊಂದು ಪತ್ತೆಯಾಗಿದ್ದು, ಅದನ್ನು ಜೂನ್ 1, 2023 ರಂದು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಈ ವಿಡಿಯೋದ 14 ಸೆಕೆಂಡ್‌ನ ಟೈಂಪ್ ಸ್ಟ್ಯಾಂಪ್‌ನಲ್ಲಿ ಸೂಚನೆಯೊಂದು ಕಂಡು ಬಂದಿದೆ. ಆ ಸೂಚನೆಯಲ್ಲಿ ” ಈ ವೀಡಿಯೊವನ್ನು ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ವೈರಲ್ ವೀಡಿಯೊದಲ್ಲಿ ಕಂಡುಬರುವ ಹುಡುಗಿ ಸಹ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಆಕೆಯ ಹೆಸರು ಅಂಕಿತಾ ಕರೋಟಿಯಾ. ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವ ಹಲವಾರು ವೀಡಿಯೊಗಳು ಅವರ ಚಾನಲ್‌ನಲ್ಲೇ ಕಂಡು ಬಂದಿವೆ. ಈ ಮೂಲಕ ಇವರಿಬ್ಬರು ಕೂಡ ಕಲಾವಿದರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿ ಕಂಡು ಬಂದಿದೆ. ಇದರ ಭಾಗವಾಗಿ ಇವರು ಚಿತ್ರಿಸಿರುವ ವಿಡಿಯೋ ಇದೀಗ ಸುಳ್ಳು ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ನಮಗೆ ಸ್ಪಷ್ಟವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : ಅಮೆರಿಕಕ್ಕೆ ಹೆದರುವುದಿಲ್ಲ, ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿಲ್ಲ
