ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ ಪರಿಣಾಮ ಸಾಕಷ್ಟು ಮಂದಿ ಅಮಾಯಕ ನಾಗರಿಕರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿವೆ. ಇದೀಗ ಇಸ್ರೇಲಿನ ಪೊಲೀಸರು ಪಾಲೆಸ್ಟೈನ್‌ನ 9 ವರ್ಷದ ಬಾಲಕನನ್ನು ಥಳಿಸಿ ಕೊಂದಿದ್ದಾರೆ ಎಂದು ಬರೆದುಕೊಂಡು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕೂಡ ಪೊಲೀಸರ ಗುಂಪೊಂದು ಬಾಲಕನೊಬ್ಬನ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ಸಾಕಷ್ಟು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಇಸ್ರೇಲ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಫೆಬ್ರವರಿ 10, 2015 ರಂದು ಪ್ರಕಟವಾದ YouTube ವೀಡಿಯೊವೊಂದು ಕಂಡುಬಂದಿದೆ. ಇದರ ಪ್ರಕಾರ ಇಬ್ಬರು ಸ್ವೀಡಿಷ್ ಭದ್ರತಾ ಅಧಿಕಾರಿಗಳು ಸ್ವೀಡನ್‌ನ ಮಾಲ್ಮೋದಲ್ಲಿನ ರೈಲು ನಿಲ್ದಾಣದಲ್ಲಿ ಇಬ್ಬರು ಮುಸ್ಲಿಂ ಮಕ್ಕಳನ್ನು ಬಂಧಿಸಿದ್ದಾರೆ. ಈ ಘಟನೆ ಫೆಬ್ರವರಿ 6, 2015 ರಂದು ನಡೆದಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ 9 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವೀಡಿಯೊವನ್ನು ಮುಸ್ಲಿಂ ಪಬ್ಲಿಕ್ ಅಫೇರ್ಸ್ ಕಮಿಟಿ UK ಸಹ ಹಂಚಿಕೊಂಡಿದ್ದು , ಭದ್ರತಾ ಸಿಬ್ಬಂದಿಯೊಬ್ಬರು ಯುವ ಮುಸ್ಲಿಂ ಹುಡುಗನ ತಲೆಯನ್ನು ನೆಲಕ್ಕೆ ಹೊಡೆದ ದೃಶ್ಯಗಳು ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.
ಈ ಘಟನೆಯ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಫೆಬ್ರವರಿ 12, 2015 ರಂದು ಯುಕೆ ಮೂಲದ ಸುದ್ದಿ ವೆಬ್‌ಸೈಟ್ ದಿ ಇಂಡಿಪೆಂಡೆಂಟ್ ಪ್ರಕಟಿಸಿದ ಲೇಖನವು ನಮಗೆ ಕಂಡು ಬಂದಿದೆ. ಇದರಲ್ಲಿ ಕೂಡ ಮಾಲ್ಮೋ ರೈಲು ನಿಲ್ದಾಣದಲ್ಲಿ ಸ್ವೀಡಿಷ್ ಭದ್ರತಾ ಸಿಬ್ಬಂದಿಯೊಬ್ಬರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ 9 ವರ್ಷದ ಬಾಲಕ ಮತ್ತು ಅವನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸ್ವೀಡನ್‌ನ ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಇಸ್ರೇಲಿ ಪೊಲೀಸ್ ಸಿಬ್ಬಂದಿ ಪ್ಯಾಲೇಸ್ಟೈನಿಯನ್ ಮಗುವನ್ನು ಕತ್ತು ಹಿಸುಕಿ ಕೊಲ್ಲುವ ದೃಶ್ಯಗಳಾಗಿದೆ ಎಂಬ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಹೀಗಾಗಿ ವೈರಲ್ ಆಗುತ್ತಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮೃಗಾಲಯದ ಆವರಣದಲ್ಲಿರುವ ಹೊಂಡದಿಂದ ಆನೆಯೊಂದು ಮಗುವನ್ನು ರಕ್ಷಿಸಿದೆ ಎಂದು AI ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.