ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಅಮೆರಿಕ ಮತ್ತು ಕೆನಡಾ ದೇಶಗಳು ತಮ್ಮ ದೇಶಕ್ಕೆ ಪ್ರಯಾಣಿಸಲು ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಮತ್ತು ಉದ್ಯಮಿ ಗೌತಮ್ ಅದಾನಿ ಅವರಿಗೂ ಅನ್ವಯವಾಗಿದೆ. ಈಗ ಭಾರತದ ಅಧಿಕಾರಿಗಳು ಉದ್ಯಮಿಗಳು ಮತ್ತು ಮಂತ್ರಿಗಳು ಕೂಡ ಈ ದೇಶಗಳಿಗೆ ಪ್ರಯಾಣಿಸಲು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
Modi’s “Vishwaguru” claim gets a reality check:
• Gautam Adani: Can’t enter the USA 🇺🇸
• Amit Shah: Barred from Canada 🇨🇦
• Ajit Doval: Denied a US visa 🇺🇸Yet, BJP’s IT cell keeps selling the ‘global leader’ narrative! 🤔 #Adani pic.twitter.com/iZNDVGFYEz
— Chikku (@imChikku_) November 22, 2024
ಈ ಪೋಸ್ಟ್ ನೋಡಿದ ಹಲವು ಮಂದಿ ಅಮೆರಿಕ ಮತ್ತು ಕೆನಡಾ ದೇಶಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಇದು ರಾಜತಾಂತ್ರಿಕವಾಗಿ ಎರಡು ದೇಶಗಳು ಮಾಡಿಕೊಂಡ ಮಹಾ ಎಡವಟ್ಟು ಎಂದು ಹೇಳುತ್ತಿದ್ದಾರೆ. ಹಲವರು ಈ ಪೋಸ್ಟ್ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಶೇರ್ ಆಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Adani,Amit Shah,Ajit Doval can't travel to US or Canada.. pic.twitter.com/9fjpZ6qTtl
— Shenaz (@WeThePeople3009) November 25, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವೆಬ್ಸೈಟ್ನಲ್ಲಿ 30 ಅಕ್ಟೋಬರ್ 2024 ರಂದು ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳನ್ನು ಒಳಗೊಂಡ ಪ್ರಕಟಣೆಯೊಂದು ಕಂಡುಬಂದಿದೆ. ಇದರಲ್ಲಿ ಕೆನಡಾದ ನೆಲದಲ್ಲಿ ನಾಯಕರಿಗೆ ಹಾನಿ ಮಾಡುವ ಸಂಚುಗಳಲ್ಲಿ ಭಾರತದ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ ಎಂಬ ಆರೂಪದ ಬಗ್ಗೆ ಕೆನಾಡದ ಪತ್ರಕರ್ತರು ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯು ಮಿಲ್ಲರ್ ಬಳಿ ಕೇಳಿದ್ದಾರೆ. ಈ ವೇಳೆ ಇವುಗಳನ್ನು ಕೇವಲ ಆರೋಪ ಎಂದಿರುವ ಅವರು, ಈ ವಿಚಾರದ ಕುರಿತು ಅಮೆರಿಕ ಕೆನಡದೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದೆ ಎಂದು ಹೇಳಿರುವ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಟವನ್ನು ನಡೆಸಿದಾಗ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಅವರು ಸಂಸದೀಯ ಸಮಿತಿಯ ಮುಂದೆ ಮಾತನಾಡಿರುವ ವಿಡಿಯೋವೊಂದು ಕಂಡುಬಂದಿದೆ. ಅದರಲ್ಲಿ ಕೆನಡಾ ಸಿಖ್ ಪ್ರತ್ಯೇಕವಾದಿಗಳ ವಿರುದ್ಧ ಹಿಂಸಾಚಾರ ಬೆದರಿಕೆ ಮತ್ತು ಗುಪ್ತಚರ ಕಾರ್ಯಾಚರಣೆಗಳನ್ನು ಅಮಿತ್ ಶಾ ನಡೆಸಿದ್ದರು ಎಂದು ಮಾರಿಸನ್ ಆರೋಪಿಸಿದ್ದಾರೆ. ಇನ್ನು ಅವರು ವಾಷಿಂಗ್ಟನ್ ಪೋಸ್ಟ್ಗೆ ಅಮಿತ್ ಶಾ ಅವರ ಹೆಸರನ್ನು ಉಲ್ಲೇಖಿಸಿದ್ದು, ಆದರೆ ಈ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.
ಇನ್ನು ಅಮಿತ್ ಶಾ ಅವರಿಗೆ ಪ್ರಯಾಣದ ನಿರ್ಬಂಧ ವಿಧಿಸಿರುವ ಬಗ್ಗೆ ಯಾವುದೇ ರೀತಿಯ ಮಾಹಿತಿ ಅಮೆರಿಕ ಸರ್ಕಾರದ ಅಧಿಕೃತ ವೆಬ್ಸೈಟ್ಗಳಲ್ಲಿ ಕಂಡುಬಂದಿಲ್ಲ. 9 ಅಕ್ಟೋಬರ್ 2024 ರಂದು ಹೊರಡಿಸಲಾದ ಅಮೆರಿಕದ ನಿಷೇಧವು ಮಾಜಿ ಈಕ್ವೆಡಾರ್ ನಾಯಕರಾದ ರಾಫೆಲ್ ವಿಸೆಂಟೆ ಕೊರಿಯಾ ಡೆಲ್ಗಾಡೊ ಮತ್ತು ಜಾರ್ಜ್ ಡೇವಿಡ್ ಗ್ಲಾಸ್ ಎಸ್ಪಿನೆಲ್ ಅವರನ್ನು ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗಕ್ಕಾಗಿ ವಿಧಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಇನ್ನು ಭಾರತದ ರಾಷ್ಟ್ರೀಯ ಭದ್ರತೆ ಸಲಹೆ ಅಜಿತ್ ದೋವಲ್ ಅವರಿಗೆ ಪ್ರಯಾಣದ ನಿರ್ಬಂಧವನ್ನು ವಿಧಿಸಲಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದಾಗ, ಇದಕ್ಕೆ ಸಂಬಂಧಪಟ್ಟ ಯಾವುದೇ ವರದಿಗಳು ಕಂಡುಬಂದಿಲ್ಲ. ಇನ್ನು ಇದೇ ಸಪ್ಟೆಂಬರ್ 2024 ರಂದು ಕಂಡುಬಂದ ಇತರೆ ವರದಿಗಳಲ್ಲಿ, ಪ್ರತ್ಯೇಕವಾಗಿ ಗುರು ಪಂಥ್ವಸಿಂಗ್ ಪನ್ನು ಭಾರತ ಸರ್ಕಾರವು ತನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ, ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದ್ದ ಎಂದು ವರದಿಯಾಗಿದೆ. ಈ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್, ಮಾಜಿ ರಾ ಮುಖ್ಯಸ್ಥ ಸಮಂತ್ ಗೋಯೆಲ್, ರಾ ಏಜೆಂಟ್ ವಿಕ್ರಮ್ ಯಾದವ್ ಮತ್ತು ಉದ್ಯಮಿ ನಿಖಿಲ್ ಗುಪ್ತಾ ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಈತ ಮೊಕದ್ದಮೆಯಲ್ಲಿ ಹೆಸರಿಸಿದ್ದ. ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯೂಯಾರ್ಕ್ನ ಸದರ್ನ್ ಡಿಸ್ಟಿಕ್ ಕೋರ್ಟ್ ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದ್ದು, 21 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿಕೆ ನೀಡಿತ್ತು. ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಅವರು ಈ ಆರೋಪಗಳನ್ನು ಆಧಾರ ರಹಿತ ಎಂದು ತಳ್ಳಿ ಹಾಕಿದ್ದರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಮೊಕದ್ದಮೆಯನ್ನು ಆಧಾರ ರಹಿತವಾಗಿದೆ ಎಂದು ಸ್ಪಷ್ಟಪಡಿಸಿರುವುದು ಕಂಡುಬಂದಿದೆ.

ಇದಾದ ನಂತರದಲ್ಲೂ ಯಾವುದೇ ವರದಿಗಳಲ್ಲೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಕೆನಡಾ ಮತ್ತು ಅಮೆರಿಕ ಪ್ರವಾಸ ನಿರ್ಬಂಧ ವಿಧಿಸಿರುವ ಕುರಿತು ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು ಅದಾನಿ ವಿರುದ್ಧದ ಪ್ರವಾಸ ನಿರ್ಬಂಧದ ಕುರಿತು ಪರಿಶೀಲನೆಯನ್ನು ನಡೆಸಿದಾಗ ಅಮೆರಿಕದಲ್ಲಿ ಅದಾನಿ ಸಮೂಹ ಭಾರತದಲ್ಲಿ ಲಂಚ ನೀಡಿರುವ ಕುರಿತು ಪ್ರಕರಣ ದಾಖಲಾಗಿದ್ದು, ಈ ಕುರಿತು ವಿಚಾರಣೆ ನಡೆಸಿರುವ ಅಮೆರಿಕದ ನ್ಯಾಯಾಲಯ ಬಂಧನದ ವಾರೆಂಟನ್ನು ನೀಡಿರುವ ಕುರಿತು ವರದಿಯಾಗಿದೆ. ಇನ್ನು ಇದಕ್ಕೆ ಅದಾನಿ ಸಮೂಹ ಕೂಡ ಈ ಆರೋಪಗಳೆಲ್ಲ ಅಧಾರ ರಹಿತವಾಗಿದೆ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸ್ಪಷ್ಟ ಪಡಿಸಿದೆ. ಆದರೆ ಈ ವರದಿಯಲ್ಲಿ ಎಲ್ಲಿಯೂ ಕೂಡ ಅದಾನಿಗೆ ಕೆನಡಾ ಹಾಗೂ ಅಮೆರಿಕ ಪ್ರವಾಸದ ನಿರ್ಬಂಧವನ್ನು ವಿಧಿಸಿದೆ ಎಂಬ ಅಂಶಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ರಾಷ್ಟ್ರೀಯ ಭದ್ರತೆ ಸಲಹೆಗಾರರಾದ ಅಜಿತ್ ದೊವೆಲ್ ಮತ್ತು ಅದಾನಿ ಸಮೂಹದ ಮುಖ್ಯಸ್ಥ ಅದಾನಿಗೆ ಕೆನಡಾ ಮತ್ತು ಅಮೆರಿಕದ ಪ್ರವಾಸವನ್ನ ನಿರ್ಭಂಧಿಸಲಾಗಿದೆ ಎಂಬುದು ಸುಳ್ಳಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಅಮಿತಾಬ್ ಬಚ್ಚನ್ ಮುಸಲ್ಮಾನರನ್ನು ನಿಂದಿಸಿದ್ದಾರೆ ಎಂದು AI ಧ್ವನಿಯನ್ನು ಬಳಸಿ ವಿಡಿಯೋ ಹಂಚಿಕೆ

