ಭಾರತೀಯ ಪುರಾತತ್ವಜ್ಞರು ನಂಬಲಾಗದ ಮಹತ್ತರ ಅಂಶವನ್ನು ಕಂಡುಹಿಡಿದಿದ್ದಾರೆ. ಈಗ ಇದು ಇಡೀ ಜಗತ್ತನ್ನು ತನ್ನತ್ತ ಸೆಳೆದಿದೆ. ಹೌದು ಭೂಮಿಯ ಮೇಲೆ ಪ್ರಾಚೀನ ಅಂತರಿಕ್ಷಾ ನೌಕೆಗಳು ಕಂಡುಬಂದಿದೆ. ಇದೀಗ ಜಗತ್ತಿನ ವೈಜ್ಞಾನಿಕ ಲೋಕದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಇದು ಮಾನವ ಇತಿಹಾಸ ಮತ್ತು ಅದರ ಪ್ರಾಚೀನ ತಂತ್ರಜ್ಞಾನಗಳ ಕುರಿತು ಹೊಸದೊಂದು ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋದಲ್ಲೂ ಕೂಡ ಪುರಾತನ ಅಂತರಿಕ್ಷ ನೌಕಗಳಂತೆ ಕಂಡುಬರುವ ಹಲವು ವಸ್ತುಗಳು ಕಾಣಿಸಿಕೊಂಡಿದೆ. ಇದು ನಿಜವಾದ ಚಿತ್ರಗಳಂತೆ ಭಾಸವಾಗುವುದರಿಂದ ಹಲವರು ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ಭಾರತದ ಪುರಾತನ ನಾಗರಿಕತೆಯು ಉತ್ತುಂಗದ ಸ್ಥಿತಿಯಲ್ಲಿ ಇತ್ತು ಎಂಬುದಕ್ಕೆ ಮತ್ತು ಅಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಭಾರತೀಯರು ಬಳಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ವೈರಲ್ ಪೋಸ್ಟ್ನಲ್ಲಿ ಉಲ್ಲೇಖಿಸಿರುವ ಅಂಶ ನಿಜವೇ ಎಂದು ಹಲವು ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಕುರಿತು ಯಾವುದೇ ರೀತಿಯಾದ ಅಧಿಕೃತ ವರದಿಗಳನ್ನು ಯಾವುದೇ ಮಾಧ್ಯಮಗಳು ಪ್ರಕಟಿಸಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ, ಎಲ್ಲಾ ಮಾಧ್ಯಮಗಳು ಈ ಕುರಿತು ಸಮಗ್ರವಾದ ವರದಿಗಳನ್ನು ಪ್ರಕಟಿಸುತ್ತಿದ್ದವು. ಹೀಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ ವೈರಲ್ ಫೋಟೋಗಳನ್ನು ಬಳಸಿಕೊಂಡು AI ಫೋಟೋಗಳನ್ನು ಪತ್ತೆ ಹಚ್ಚುವ ಸಾಧನವಾದ AI ಹೈವ್ ಮಾಡ್ರೇಶನ್ ಇಮೇಜ್ ಡಿಟೆಕ್ಟರ್ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದೆವು. ಈ ವೇಳೆ ಪಲಿತಾಂಶದಲ್ಲಿ ವೈರಲ್ ಫೋಟೋ ಶೇಕಡ 93.3ರಷ್ಟು ನಿರ್ಮಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ವೈರಲ್ ಫೋಟೋವನ್ನು AI ಬಳಸಿ ನಿರ್ಮಾಣ ಮಾಡಲಾಗಿದ್ದು, ಇದರ ಮೂಲಕ ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಭಾರತದ ಸಂಶೋಧಕರು ದೇಶದ ಅತ್ಯಂತ ಪುರಾತನ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಅಂತರಿಕ್ಷ ನೌಕೆಗಳನ್ನು ಪತ್ತೆ ಹಚ್ಚಿದ್ದಾರೆ ಎಂಬ ಚಿತ್ರಗಳು AIನಿಂದ ನಿರ್ಮಿಸಲಾಗಿದೆ. ಈ ಫೋಟೋಗಳನ್ನು AIನಿಂದ ನಿರ್ಮಿಸಿ ಸುಳ್ಳು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು AI ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಿಂದ ದೃಢಪಟ್ಟಿದೆ. ಈ ಕಾರಣದಿಂದ ವೈರಲ್ ಪೋಸ್ಟ್ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : FACT CHECK | ʼಎಂಪಾಕ್ಸ್ʼ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು WHO ಹಿಂಪಡೆದಿದೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

