ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಅದರಲ್ಲಿ ಮಗುವೊಂದು ಅಳುತ್ತಿರುವ ವಿಡಿಯೋ ಹೆಚ್ಚಾಗಿ ಹಂಚಿಕೊಡಲಾಗುತ್ತಿದ್ದು, ಇದು ಕೂಡ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಪಟ್ಟಿದೆ ಎನ್ನಲಾಗುತ್ತಿದೆ.

ಹಲವು ಮಂದಿ “ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಈ ಮಗು ಅನಾಥವಾಗಿದೆ. ಈಗ ಈ ಮಗುವಿನ ಹೊಣೆಯನ್ನು ಯಾರು ಹೊತ್ತುಕೊಳ್ಳಲಿದ್ದಾರೆ?” ಎಂಬಂತ ಪ್ರಶ್ನೆಗಳನ್ನು ಬರೆದುಕೊಂಡು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿದ ಹಲವು ಮಂದಿ ಇದು ಪೆಹಲ್ಗಾಮ್ಗೆ ಸಂಬಂಧಿಸಿದ ವಿಡಿಯೋ ಎಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ 1 ಜುಲೈ 2020 ರಂದು ANI ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಅಪ್ಲೋಡ್ ಮಾಡಿದ ಮೂಲ ವಿಡಿಯೋ ಪತ್ತೆಯಾಗಿದೆ. ಇದರಲ್ಲಿ “ಸೋಪೋರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೂರು ವರ್ಷದ ಮಗುವನ್ನು ರಕ್ಷಿಸಿ, ತಾಯಿಯ ಬಳಿಗೆ ಕರೆದೊಯ್ದರು, ದಾಳಿಯ ಸಮಯದಲ್ಲಿ ಮಗು ತಮ್ಮ ಸಂಬಂಧಿಯ ಪಕ್ಕದಲ್ಲಿ ಕುಳಿತಿತ್ತು” ಎಂದು ಬರೆಯಲಾಗಿತ್ತು
#WATCH Jammu & Kashmir Police console a 3-year-old child after they rescued him during a terrorist attack in Sopore, take him to his mother. The child was sitting beside his dead relative during the attack. pic.twitter.com/znuGKizACh
— ANI (@ANI) July 1, 2020
ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ 1 ಜುಲೈ 2020 ರಂದು ಇಂಡಿಯಾ ಟುಡೇ ತನ್ನ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ವರದಿಯೊಂದು ಕಂಡು ಬಂದಿದೆ. ಇದರಲ್ಲೂ ಕೂಡ ವೈರಲ್ ವಿಡಿಯೋ ಜಮ್ಮು ಮತ್ತು ಕಾಶ್ಮೀರದ ಸೋಪೋರ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಾಗಿದೆ ಎಂಬುದನ್ನು ಉಲ್ಲೇಖಿಸಿರುವುದು ಕಂಡುಬಂದಿದೆ. ಇದೇ ರೀತಿಯ ಹಲವು ವರದಿಗಳು ಪ್ರಕಟಗೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪೆಹಲ್ಗಾಮ್ನ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಲ್ಲ, ಇದು 2020 ರಂದು ಜಮ್ಮು ಮತ್ತು ಕಾಶ್ಮೀರದ ಸೋಪೊರ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಾಗಿದೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿರುವುದು ಸಾಬೀತಾಗಿದ್ದು, ಈ ಕಾರಣದಿಂದ ಸಂಚಲನ ಮೂಡಿಸಿರುವ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಭಾರತೀಯ ಸೇನೆ ಪಶ್ಚಿಮ ಬಂಗಾಳದಲ್ಲಿ ಮನೆಗಳ ಮೇಲೆ ದಾಳಿ ಮಾಡಿ ಮುಸ್ಲಿಂ ಪುರುಷರನ್ನು ಬಂಧಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

