ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಮನರಂಜನಾ ಮಿಷನ್ನಿಂದ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ, ತೆಲಂಗಾಣ ರಾಜ್ಯ ಒಂದಕ್ಕೆ ಈ ಮಿಷನ್ ಅಡಿಯಲ್ಲಿ 6,881 ಹುದ್ದೆಗಳನ್ನು ಮೀಸಲಿರಿಸಲಾಗಿದೆ ಎಂದು ಪತ್ರಿಕೆಯ ಜಾಹೀರಾತು ಪೋಸ್ಟರ್ ವೈರಲ್ ಆಗುತ್ತಿದೆ. ಅದರಲ್ಲೂ ತೆಲುಗಿನ ಈನಾಡು ಸುದ್ದಿ ಸಂಸ್ಥೆಯ ಹೆಸರಿನಲ್ಲಿ ಈ ಜಾಹೀರಾತು ವೈರಲ್ ಆಗಿರುವುದು ಕಂಡುಬಂದಿದೆ.

ಹಲವರು ಈ ಜಾಹೀರಾತು ಗಮನಿಸಿ, ಇದು ನಿಜವೆಂದು ಭಾವಿಸಿ, ಅರ್ಜಿ ಸಲ್ಲಿಸಲು ಕೂಡ ಮುಂದಾಗಿದ್ದಾರೆ. ಇನ್ನೂ ಕೆಲವರು ತೆಲಂಗಾಣದಲ್ಲಿ ವಿವಿಧ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಕೆಲವೊಂದು ಸುದ್ದಿ ಸಂಸ್ಥೆಗಳು ಕೂಡ ಇದೇ ಸುದ್ದಿಯನ್ನ ಪರಿಶೀಲಿಸದೆ ವರದಿ ಮಾಡಿವೆ. ಹೀಗೆ ಶೇರ್ ಮಾಡಲಾಗುತ್ತಿರುವ ಜಾಹೀರಾತಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿರುವ ವೈರಲ್ ಜಾಹೀರಾತಿನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಜಾಹೀರಾತುವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಆದರೆ ಇದರಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ನ ಲಿಂಕ್ ನೀಡದಿರುವುದು ನಮಗೆ ಸ್ಪಷ್ಟವಾಗಿ ಕಂಡುಬಂದಿದೆ. ಒಂದು ವೇಳೆ ಇದು ಸರ್ಕಾರಿ ಜಾಹೀರಾತಾಗಿದ್ದರೆ gov.in ಅಥವಾ inc.in ಎಂಬ ಡೊಮೆನ್ಗಳನ್ನು ಬಳಸಲಾಗುತ್ತಿತ್ತು ಆದರೆ ಇಲ್ಲಿ ಇಂತಹ ಲಿಂಕ್ ಕಂಡು ಬರದಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತು.


ಹೀಗಾಗಿ ನಾವು ವೈರಲ್ ಜಾಹೀರಾತಿನಲ್ಲಿನ ಲಿಂಕ್ ಅನ್ನು ಸ್ಕ್ಯಾಮ್ ಡಿಟೆಕ್ಟರ್ನಲ್ಲಿ ಪರಿಶೀಲನೆ ನಡೆಸಲು ಬಳಸಿಕೊಂಡೆವು. ವೈರಲ್ ಜಾಹೀರಾತಿನಲ್ಲಿ ನೀಡಲಾದ ಎರಡು ಲಿಂಕ್ಗಳಿಗೆ 100/7.5 ಮತ್ತು 100/5.7 ರಷ್ಟು ಕಡಿಮೆ ವಿಶ್ವಾಸರ್ಹ ಫಲಿತಾಂಶವನ್ನು ನೀಡಿತು. ಆ ಮೂಲಕ ವೈರಲ್ ವೆಬ್ಸೈಟ್ ಲಿಂಕ್ ನಕಲಿ ಮತ್ತು ವಂಚನೆಯ ಜಾಲವಾಗಿದೆ ಎಂಬುದು ನಮಗೆ ಸ್ಪಷ್ಟವಾಗಿತ್ತು.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ 7 ಫೆಬ್ರವರಿ 2025 ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ ವೈರಲ್ ಆಗುತ್ತಿರುವ ಜಾಹೀರಾತು ನಕಲಿ ಎಂಬುದನ್ನು ಸ್ಪಷ್ಟಪಡಿಸಿ ಪೋಸ್ಟ್ಗಳನ್ನು ಮಾಡಿರುವುದು ಕಂಡುಬಂದಿದೆ.
#ScamAlert l नेशनल रूरल डेवलपमेंट एंड रिक्रिएशन मिशन NRDRM के तहत हजारों सरकारी नौकरियों का विज्ञापन #फर्जी
ग्रामीण विकास मंत्रालय, भारत सरकार द्वारा ऐसा कोई विज्ञापन जारी नहीं किया गया है। NRDRM नाम की कोई सरकारी संस्था अस्तित्व में ही नहीं है।
फर्जी नौकरी के ऐसे झांसे में ना… pic.twitter.com/zytdWx7F1z
— Ministry of Rural Development, Government of India (@MoRD_GoI) February 7, 2025
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಈನಾಡು ಸುದ್ದಿ ಸಂಸ್ಥೆಯ ಜಾಹೀರಾತು ನಕಲಿಯಾಗಿದೆ ಮತ್ತು ಇದರಲ್ಲಿ ನೀಡಿದ ವೆಬ್ಸೈಟ್ ಲಿಂಕ್ ವಂಚನೆಯ ಜಾಲವಾಗಿದೆ. ಹಾಗಾಗಿ ವೈರಲ್ ಜಾಹೀರಾತಿನ ಪೋಸ್ಟರ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಸೋತರೂ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

