ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ವೈರಲ್ ಆಗಿದ್ದು, ಅದರಲ್ಲಿ ನವಿಲಿನ ಕಲಾಕೃತಿಯನ್ನು ಖಾಲಿ ಬಾಟಲಿಗಳಿಂದ ಮಾಡಲ್ಪಟ್ಟಿದೆ. ಅದೇ ಸಮಯದಲ್ಲಿ, ಪಕ್ಕದಲ್ಲಿ ಹುಡುಗಿಯೊಬ್ಬಳು ನಿಂತಿರುವ ಕಾರಣ, ಇದು ಖಾಲಿ ಬಾಟಲಿಗಳಿಂದ ಮಾಡಿದ ಕಲಾಕೃತಿಯ ನಿಜವಾದ ಫೋಟೋ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ರೀತಿಯಾದ ಪ್ರತಿಭೆಗಳನ್ನು ಬೆಳೆಸಬೇಕಾಗಿದೆ ಎಂದು ಹಲವರು ಹೇಳುತ್ತಿರುವುದು ಕಂಡು ಬಂದಿದೆ. ಕೆಲವರು ಆ ಮಗುವೇ ಈ ಕಲಾಕೃತಿಯನ್ನು ರಚಿಸಿದೆ ಎಂದು ಕೂಡ ಹೇಳುತ್ತಿದ್ದಾರೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ಹಲವು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ವಿವಿಧ ರೀತಿಯಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹಲವರು ನಿಜವೆಂದು ನಂಬಿದರೆ ಇನ್ನೂ ಕೆಲವರು ಇದು ಸುಳ್ಳು ಪ್ರತಿಪಾದನೆಯಾಗಿದೆ ಎಂದು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ವೈರಲ್ ಪೋಟೋ ವಿವಿಧ ರೀತಿಯಾದ ಗೊಂದಲವನ್ನು ಕೂಡ ಸೃಷ್ಟಿಸಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಮೊದಲು ಸೂಕ್ಷ್ಮವಾಗಿ ಗಮನಿಸಿದೆವು. ಈ ವೇಳೆ ನಮಗೆ ಚಿತ್ರದಲ್ಲಿನ ಕೆಲವು ನ್ಯೂನತೆಗಳು ಕಂಡು ಬಂದಿದೆ. ಉದಾಹರಣೆಗೆ ಹುಡುಗಿಯ ಕೈ ಮತ್ತು ಕಾಲುಗಳ ಆಕಾರ, ನೆಲದ ಮೇಲೆ ಬಿದ್ದಿರುವ ಬಾಟಲಿಗಳ ಆಕಾರವೂ ವಿಭಿನ್ನವಾಗಿದೆ. ಇದರಿಂದಾಗಿ ಫೋಟೋವನ್ನು AI ಮೂಲಕ ಸಿದ್ಧಪಡಿಸಲಾಗಿದೆ ಎಂಬ ಅನುಮಾನವನ್ನು ಕೂಡ ನಮ್ಮಲ್ಲಿ ಹುಟ್ಟು ಹಾಕಿತು. ಹೀಗಾಗಿ ನಾವು AI ಫೋಟೋ ಗುರುತಿಸುವಿಕೆ ಟೂಲ್ ಹೈವ್ ಮಾಡರೇಶನ್ಗೆ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿದ್ದೆವು. ಈ ವೇಳೆ ನಮಗೆ 99.9% AI ಮೂಲಕ ಈ ಫೋಟೋವನ್ನು ರಚಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ.

ಈ ಬಗ್ಗೆ ಖಚಿತ ಪಡಿಸಿಕೊಳ್ಳುಲು ನಾವು ಈ ಫೋಟೋವನ್ನು ಮತ್ತೊಂದು AI ಕಾನ್ಸೆಪ್ಟ್ ಟೆಸ್ಟಿಂಗ್ ಟೂಲ್ ‘ಸೈಟ್ ಎಂಜಿನ್’ ನಲ್ಲಿ ಅಪ್ಲೋಡ್ ಮಾಡಿದ್ದೇವೆ. ಇಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಫೋಟೋವನ್ನು 99 ಪ್ರತಿಶತ AI ನೊಂದಿಗೆ ರಚಿಸಲಾಗಿದೆ ಎಂಬ ಫಲಿತಾಂಶವನ್ನು ನೀಡಿದೆ. ಅಲ್ಲಿಗೆ ಈ ವೈರಲ್ ಫೋಟೋವನ್ನು AI ನಿಂದ ನಿರ್ಮಾಣವಾಗಿದೆ ಎಂಬುದು ಖಚಿತವಾಗಿದೆ. ಆದರೆ ಈ ಫೋಟೋವಿನ ಮೂಲ ಯಾವುದು ಎಂಬುದು ಇದುವರೆಗೂ ಪತ್ತೆಯಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಖಾಲಿ ಬಾಟಲಿಗಳಿಂದ ಮಾಡಿದ ನಿಜವಾದ ನವಿಲಿನ ಕಲಾಕೃತಿ ಎಂದು ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ AI ನಿಂದ ರಚಿಸಲಾಗಿದೆ ಎಂಬುದು ಖಚಿತವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ವೈರಲ್ ಪೋಸ್ಟ್ ಅನ್ನು ಶೇರ್ ಮಾಡಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಅಮೇರಿಕಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಸೈಮನ್ ಕೋವೆಲ್ ನಿಧನರಾಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

