ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಹಾರ್ಮೋನಿಯಂ ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದು, ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸೋಲಿನ ನಂತರ ಸಂಜಯ್ ರಾವುತ್ ಹಾರ್ಮೋನಿಯಂ ನುಡಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾಕಷ್ಟು ಮಂದಿ ಈ ವಿಡಿಯೋಗೆ ವಿವಿಧ ಬರಹಗಳನ್ನು ಬರೆದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.
After finishing off all the three alliance partners in one stroke, Rautya is playing the harmonium.😝😝😝 pic.twitter.com/OePG85BvLN
— Deepak Prabhu (@ragiiing_bull) November 24, 2024
ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಈ ಸೋಲಿನ ನಂತರವೂ ಸಂಜಯ್ ರಾವುತ್ ತಮ್ಮ ರಾಜಕೀಯವನ್ನು ನಿಲ್ಲಿಸುವುದಿಲ್ಲ ಎಂದು ನಕರಾತ್ಮಕವಾಗಿ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ನ್ಯೂಸ್ 18 ಮರಾಠಿಯ ವೆಬ್ಸೈಟ್ನಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ವರದಿಯೊಂದು ಕಂಡುಬಂದಿದೆ. ಇದನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಸಂಜಯ್ ರಾವುತ್ ತಮ್ಮ ಮನೆಯಲ್ಲಿ ಮನೆಯವರ ಮುಂದೆ ಹಾರ್ಮೋನಿಯಂ ನುಡಿಸಿದ್ದು, ಅದರ ವಿಡಿಯೋವನ್ನು ಅವರ ಮಗಳು ಪೂರ್ವಶೀ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 25 ಮಾರ್ಚ್ 2020 ರಂದು ನ್ಯೂಸ್ ಎಕ್ಸ್ಪ್ರೆಸ್ನ ಅಧಿಕೃತ YouTube ಚಾನಲ್ನಲ್ಲಿ ವೈರಲ್ ವಿಡಿಯೋವನ್ನು ಇದೇ ಮಾಹಿತಿಯೊಂದಿಗೆ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಇದರ ಪ್ರಕಾರ ಸಂಜಯ್ ರಾವುತ್ ಅವರು ತಮ್ಮ ಮನೆಯಲ್ಲಿ ಕುಟುಂಬದ ಮುಂದೆ ಹಾರ್ಮೋನಿಯಂ ನುಡಿಸಿದ್ದಾರೆ ಎಂದು ಈ ವಿಡಿಯೋ ವರದಿಯಲ್ಲಿ ಕೂಡ ಉಲ್ಲೇಖವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಇತ್ತೀಚಿಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಸೋತ ನಂತರ ನಿರಾಶೆಗೆ ಒಳಗಾಗಿ ಸಂಜಯ್ ರಾವುತ್ ಅವರು ಹಾರ್ಮೋನಿಯಂ ನುಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ವಿಡಿಯೋ ಸಂಜಯ್ ರಾವುತ್ ತಮ್ಮ ಮನೆಯವರೊಂದಿಗೆ ಇದ್ದ ಸಂದರ್ಭದಲ್ಲಿ ಕಳೆದ ಸಂತಸದ ಕ್ಷಣವಾಗಿದೆ. ಹಾಗಾಗಿ ಸುಳ್ಳು ಮಾಹಿತಿಯಿಂದ ಕೂಡಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಮಹಾರಾಷ್ಟ್ರದಲ್ಲಿ ಇವಿಎಂ ವಿರುದ್ಧದ ಪ್ರತಿಭಟನೆ ಎಂದು ಜಂತರ್ ಮಂತರ್ನ ಹಳೆಯ ವಿಡಿಯೋ ಹಂಚಿಕೆ

