ಅಫ್ಘಾನಿಸ್ತಾನದ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ಭಾರತೀಯ ಧ್ವಜವನ್ನು ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಅಫ್ಘಾನಿಸ್ತಾನವು ಪಾಕಿಸ್ತಾನದ ನೆಲದಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸಿದೆ, ಆ ಮೂಲಕ ಪಾಕಿಸ್ತಾನಕ್ಕೆ ಮುಖಭಂಗವನ್ನು ಉಂಟು ಮಾಡಿದೆ. ಕ್ರಿಕೆಟ್ ಇತಿಹಾಸದಲ್ಲೇ ಇದು ಮೊದಲು ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
https://twitter.com/berlinnji/status/1895026258419085696
ವೈರಲ್ ಫೋಟೋದಲ್ಲಿ ಕೂಡ ಅಫ್ಘಾನಿಸ್ತಾನದ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಭಾರತದ ಧ್ವಜವನ್ನು ಹಿಡಿಕೊಂಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಕಾರಣದಿಂದ ಹಲವರು ವೈರಲ್ ಫೋಟೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ, ಇದರ ಜೊತೆಗೆ ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/ashishrana12aug/status/1895323937120350568
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಜಿಯೋ ಹಾಟ್ಸ್ಟಾರ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಕೊನೆಯ ಭಾಗವನ್ನು ವೀಕ್ಷಣೆ ನಡೆಸಿದೆವು. ಇದರಲ್ಲಿ ನಮಗೆ ಪಂದ್ಯ ಮುಗಿದ ನಂತರ ಅಫ್ಘಾನಿಸ್ತಾನ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಮೈದಾನಕ್ಕೆ ಪ್ರವೇಶಿಸುವುದನ್ನು ಕಾಣಬಹುದು. ನಂತರ ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಆದರೆ ಇಲ್ಲಿ ಎಲ್ಲಿಯೂ ತ್ರಿವರ್ಣ ಧ್ವಜ ಕಂಡು ಬಂದಿದೆ.

ಇನ್ನು ನಾವು ವೈರಲ್ ಫೋಟೋಗೆ ಹೋಲುವ ದೃಶ್ಯದ ಸ್ಕ್ರೀನ್ಗ್ರ್ಯಾಬ್ ಪಡೆದುಕೊಂಡು ವೈರಲ್ ಫೋಟೋವನ್ನು ಮತ್ತು ಸ್ಕ್ರೀನ್ ಗ್ರ್ಯಾಬ್ ಅನ್ನು ಹೋಲಿಕೆ ಮಾಡಿದೆವು. ಆಗ ನಮಗೆ ವೈರಲ್ ಫೋಟೋ ಎಡಿಟೆಡ್ ಆಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ. ಇನ್ನು ವೈರಲ್ ಫೋಟೋ ಕುರಿತು ಯಾವುದಾದರೂ ಅಧಿಕೃತ ವರದಿಗಳು ಪ್ರಕಟವಾಗಿವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಆದರೆ ಆ ಕುರಿತು ಯಾವದೇ ವರದಿಗಳು ಲಭ್ಯವಾಗಿಲ್ಲ. ಹಾಗಾಗಿ ವೈರಲ್ ಫೋಟೋ ಎಡಿಟೆಡ್ ಆಗಿದೆ ಎಂಬುದು ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಂದ್ಯವನ್ನು ಗೆದ್ದ ನಂತರ ಅಫ್ಘಾನಿಸ್ತಾನ ತಂಡವು ಭಾರತೀಯ ಧ್ವಜವನ್ನು ಬೀಸುತ್ತಿದೆ ಎಂದು ಹೇಳುವ ವೈರಲ್ ಫೋಟೋ ಎಡಿಟ್ ಮಾಡಲಾಗಿದೆ. ನಿಜವಾದ ಫೋಟೋದಲ್ಲಿ, ಆ ವ್ಯಕ್ತಿ ಧ್ವಜವನ್ನು ಹಿಡಿದಿಲ್ಲ. ಅಫ್ಘಾನಿಸ್ತಾನ ಪಂದ್ಯವನ್ನು ಗೆದ್ದ ನಂತರ, ತಂಡ ಮತ್ತು ಸಹಾಯಕ ಸಿಬ್ಬಂದಿ ಮೈದಾನಕ್ಕೆ ಬಂದು ಪರಸ್ಪರ ಅಪ್ಪಿಕೊಂಡು, ಅಭಿನಂದನೆ ಸಲ್ಲಿಸುವುದು ಕಾಣ ಬಹುದಾಗಿದೆ. ಹಾಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಾಹುಲ್ ಗಾಂಧಿ ಇತ್ತೀಚೆಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

