ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಭಾರತೀಯ ಸೈನಿಕ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಧ್ವಜವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೀಡಿಯೊದಲ್ಲಿ ಸೈನಿಕ ಯೂನಿಫಾರ್ಮ್ನಲ್ಲಿರುವ ವ್ಯಕ್ತಿಯೊಬ್ಬರು ಒಬ್ಬ ವ್ಯಕ್ತಿಯನ್ನು ಥಳಿಸುತ್ತಿರುವ ದೃಶ್ಯ ಕಾಣಿಸಿಕೊಂಡಿದೆ. ಈ ವೀಡಿಯೊವನ್ನು ಭಾರತ-ಬಾಂಗ್ಲಾದೇಶದ ನಡುವಿನ ರಾಜಕೀಯ ಉದ್ವಿಗ್ನತೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗಿದ್ದು, ಭಾರತೀಯ ಸೈನ್ಯದ ಅಧಿಕಾರಿಯಿಂದ ಈ ಕೃತ್ಯ ನಡೆದಿದೆ ಎಂಬ ಕ್ಯಾಪ್ಷನ್ಗಳೊಂದಿಗೆ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.

ಈ ವೈರಲ್ ವೀಡಿಯೊ ಜನಸಾಮಾನ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಭಾರತ-ಬಾಂಗ್ಲಾದೇಶದ ಗಡಿಯ ಸಂಘರ್ಷದ ಸನ್ನಿವೇಶದಲ್ಲಿ. ಈ ಸುದ್ದಿಯಿಂದಾಗಿ ಕೆಲ ವಿದೇಶಿ ನಾಗರಿಕರು ಪರಿಶೀಲನೆಯನ್ನು ನಡೆಸದೆ ಭಾರತೀಯ ಸೈನ್ಯದ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದನ್ನು ರಾಷ್ಟ್ರೀಯ ಗೌರವಕ್ಕೆ ಸಂಬಂಧಿಸಿದ ಕೃತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವೀಡಿಯೊ ಜನರ ಭಾವನೆಗಳನ್ನು ಕೆರಳಿಸುವ ಹಾಗಿರುವುದರಿಂದ ವಿಡಿಯೋ ವೈರಲ್ ಆಗಿದೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜೂನ್ 11 ರಂದು ನ್ಯೂಸ್ 1 ಟಿವಿ ಪ್ರಕಟಿಸಿದ ‘ಸೇನೆಯು ಧ್ವಜ ಮಾರಾಟಗಾರನನ್ನು ಕಂಡುಹಿಡಿದು 1 ಲಕ್ಷ ಟಾಕಾ ದೇಣಿಗೆ ನೀಡಿದೆ!’ ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊವೊಂದು ಕಂಡು ಬಂದಿದೆ. ಜೂನ್ 12 ರಂದು ಢಾಕಾ ಪೋಸ್ಟ್ ಕೂಡ ಇದೇ ರೀತಿಯ ವೀಡಿಯೊವನ್ನು ಅಪ್ಲೋಡ್ ಮಾಡಿತ್ತು. ‘ಲಾಠಿ ಚಾರ್ಜ್ ಮಾಡಿದ ಧ್ವಜ ಮಾರಾಟಗಾರನಿಗೆ ಸೇನೆ 10 ಲಕ್ಷ ಟಾಕಾ ಉಡುಗೊರೆ ನೀಡಿದೆ’ ಎಂಬ ಶೀರ್ಷಿಕೆಯ ವಿಡಿಯೋ ಇದಾಗಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹಲವು ವರದಿಗಳು ಕಂಡು ಬಂದಿವೆ. ಈ ವರದಿಗಳ ಪ್ರಕಾರ ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ vs ಸಿಂಗಾಪುರ ಫುಟ್ಬಾಲ್ ಪಂದ್ಯದ ವೇಳೆ ಧ್ವಜ ಮಾರಾಟಗಾರನಿಗೆ ಕ್ರೀಡಾಂಗಣದ ಹೊರಗೆ ಜನಜಂಗಳಿ ತುಂಬಿದ್ದ ಕಾರಣ, ಬಾಂಗ್ಲಾದೇಶ ಸೇನಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬಾಂಗ್ಲಾದೇಶದ ಸೇನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಸೇನೆ, ತನ್ನ ತಪ್ಪಿಗೆ ತೇಪೆ ಹಚ್ಚಲು ಧ್ವಜ ಮಾರಾಟಗಾರನಿಗೆ ಪರಿಹಾರವನ್ನು ಘೋಷಿಸಿತ್ತು. ಇದೇ ರೀತಿಯ ವರದಿಗಳು ನಮಗೆ ಇನ್ನೂ ಹಲವು ಮಾಧ್ಯಮಗಳಲ್ಲಿ ಕಂಡು ಬಂದಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಸೈನಿಕ ಅಧಿಕಾರಿಯಿಂದ ಬಾಂಗ್ಲಾದೇಶದ ಧ್ವಜ ಮಾರಾಟಗಾರನ ಮೇಲೆ ಹಲ್ಲೆ ನಡೆದಿದೆ ಎಂಬ ವೈರಲ್ ವೀಡಿಯೊ ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಬಾಂಗ್ಲಾದೇಶದ ಸೈನಿಕನೇ ಅಲ್ಲಿನ ಧ್ವಜ ಮಾರಾಟಗಾರನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದೆ. ಇದನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಅಹಮದಾಬಾದ್ ವಿಮಾನ ಅಪಘಾತದಲ್ಲಿ ಕುರಾನ್ ಸುರಕ್ಷಿತವಾಗಿ ಪತ್ತೆಯಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

