ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಉದ್ದೇಶಿಸಿ ಮಾತನಾಡುತ್ತಿರುವ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ದಾಳಿ ಪ್ರತಿದಾಳಿಯ ಬಗ್ಗೆ, ಈ ಸಂಘರ್ಷ ದೇಶದ ಮೇಲೆ ಉಂಟುಮಾಡಿದ ವಿನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಕ್ಷಮೆಯಾಚಿಸುತ್ತಿದ್ದಾರೆ ಎಂದು ಹೇಳಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋವನ್ನು ಬಹುತೇಕ ಪಾಕಿಸ್ತಾನಿ ಖಾತೆಗಳಿಂದ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತದ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳಲು ನೆರವಾಗುತ್ತಿದ್ದು, ಭಾರತದ ಸಾರ್ವಭೌಮತ್ವಕ್ಕು ಧಕ್ಕೆ ತರುತ್ತಿದೆ. ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು ಪರಿಶೀಲನೆ ನಡೆಸದೆ ವಿವಿಧ ಬರಹಗಳನ್ನು ಬರೆದುಕೊಳ್ಳುತ್ತಿರುವುದು ಕೂಡ ಕಂಡು ಬಂದಿದೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಎರಡೂ ವಿಡಿಯಯೋ ಕ್ಲಿಪ್ಗಳನ್ನು ಪರಿಶೀಲನೆಗೆ ಒಳಪಡಿಸಿದೆವು.
ವಿಡಿಯೋ-1
ಈ ವಿಡಿಯೋದಲ್ಲಿ, ಪ್ರಧಾನಿ ಮೋದಿ ಹಿಂದಿಯಲ್ಲಿ ಮಾತನಾಡುತ್ತಾ, “ನಾವು ಪಾಕಿಸ್ತಾನವನ್ನು ದುರ್ಬಲಗೊಳಿಸಬಹುದೆಂದು ಭಾವಿಸಿದ್ದೆವು. ಆದರೆ ಇಂದು ನಾವೇ ಛಿದ್ರಗೊಂಡಿದ್ದೇವೆ. ದಯವಿಟ್ಟು ಇನ್ನು ಮುಂದೆ ನಮ್ಮನ್ನು ಹಿಂಸಿಸಬೇಡಿ. ನಮಗೆ ಶಾಂತಿ ಬೇಕು.. ಈ ಯುದ್ಧವನ್ನು ಕೊನೆಗೊಳಿಸಿ. ದಯವಿಟ್ಟು ನಮ್ಮನ್ನು ಕ್ಷಮಿಸಿ” ಎಂದು ಹೇಳುವುದನ್ನು ಕಾಣಬಹುದು. ಆ ವಿಡಿಯೋದಲ್ಲಿ ಅವರ ಮುಖದ ಅಸ್ವಾಭಾವಿಕ ಚಲನೆಗಳು ಕಂಡುಬಂದಿದ್ದು, ಪ್ರಧಾನಿ ಮೋದಿಯವರ ಧ್ವನಿಯು ಅವರ ಇತರ ವೀಡಿಯೊಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಧ್ವನಿಗೆ ಹೊಂದಿಕೆಯಾಗಲಿಲ್ಲ.

ವೈರಲ್ ವೀಡಿಯೊದ 20 ಸೆಕೆಂಡುಗಳ ಮಾದರಿ ಕ್ಲಿಪ್ ಅನ್ನು ನಾವು ಹೈವ್ ಮಾಡರೇಟರ್ ಬಳಸಿ ವಿಶ್ಲೇಷಿಸಿದ್ದೇವೆ. ಫಲಿತಾಂಶಗಳು ವೀಡಿಯೊವು AI- ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆ ಶೇಕಡ 99.6 ರಷ್ಟು ಇದೆ ಎಂದು ಪಲಿತಾಂಶ ನೀಡಿತ್ತು. ಈ ಮೂಲಕ ವೈರಲ್ ವಿಡಿಯೋ ಡೀಪ್ಫೇಕ್ನಿಂದ ರಚಿಸಲಾಗಿದೆ ಎಂಬುದು ನಮಗೆ ಖಚಿತವಾಗಿದೆ.
ವಿಡಿಯೋ-2
ವೀಡಿಯೊದಲ್ಲಿ, ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ಯುದ್ಧ, ಯುದ್ಧವು ದೇಶದ ಮೇಲೆ ಉಂಟುಮಾಡಿದೆ ಎಂದು ಹೇಳಲಾದ ವಿನಾಶ ಮತ್ತು ನಂತರದ ಕದನ ವಿರಾಮದ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಆದಾಗ್ಯೂ, ಈ ವೀಡಿಯೊವು ದೇಹ ಭಾಷೆಯಿಂದ ಸಂಪರ್ಕ ಕಡಿತಗೊಂಡ ವಿಚಿತ್ರವಾದ ಮುಖ ಚಲನೆಗಳನ್ನು ಸಹ ಹೊಂದಿದೆ. ಆಡಿಯೋ ಅನೇಕ ಅಸ್ವಾಭಾವಿಕ ವಿರಾಮಗಳೊಂದಿಗೆ ರೋಬೋಟಿಕ್ ಆಗಿದೆ. ವೈರಲ್ ವೀಡಿಯೊದ 20 ಸೆಕೆಂಡುಗಳ ಮಾದರಿ ಕ್ಲಿಪ್ ಅನ್ನು ಡೀಪ್ವೇರ್ ಬಳಸಿ ವಿಶ್ಲೇಷಿಸಲಾಗಿದೆ . ವೀಡಿಯೊ ಡೀಪ್ಫೇಕ್ ಎಂದು ಕಂಡುಬಂದಿದೆ. ನಾಲ್ಕು ಮಾದರಿಗಳಲ್ಲಿ ಮೂರು ವೀಡಿಯೊ ಶೇಕಡಾ 98 ಕ್ಕಿಂತ ಹೆಚ್ಚು ಡೀಪ್ಫೇಕ್ ಎಂದು ಫಲಿತಾಂಶ ನೀಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗಿನ ದಾಳಿ ಪ್ರತಿದಾಳಿಯ ಬಗ್ಗೆ ಮಾತನಾಡಿ ಪಾಕಿಸ್ತಾನದ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಡೀಪ್ಫೇಕ್ ಆಗಿದೆ. ಈ ಕಾರಣದಿಂದಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಸಾರ್ವಜನಿಕ ಸ್ಥಳದಲ್ಲಿ ‘ಐ ಟೋಲ್ಡ್ ಮೋದಿ’ ಪೋಸ್ಟರ್ ಹಾಕುವ ವಿಡಿಯೋ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

