ಅಮೆರಿಕ ಸೇನೆಯು ಬಿ-2 ಸ್ಟೆಲ್ತ್ ಬಾಂಬರ್ಗಳು ಮತ್ತು ಬೃಹತ್ ಬಂಕರ್-ಬಸ್ಟರ್ ಬಾಂಬ್ಗಳನ್ನು ಬಳಸಿ ಇರಾನ್ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ನಲ್ಲಿರುವ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ನಂತರ, ಕ್ಷಿಪಣಿಯಂತಹ ರಚನೆಯು ನೇರವಾಗಿ ನಿಂತು ರಸ್ತೆಯಲ್ಲಿ ಚಲಿಸುತ್ತಿರುವಂತೆ ಕಾಣುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಸಾಕಷ್ಟು ಮಂದಿ ಇಸ್ರೇಲ್ ಇರಾನ್ ಮೇಲೆ ಪರಮಾಣು ದಾಳಿಗೆ ಸಿದ್ದತೆ ನಡೆಸುತ್ತಿದೆ ಎಂದು ಉಲ್ಲೇಖಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
https://twitter.com/KPost25/status/1936754828711215531
ವೀಡಿಯೊದ ಮೇಲೆ ಅಂಟಿಸಲಾದ ಹಿಂದಿ ಪಠ್ಯವು ಇರಾನ್ ಮೇಲೆ ಪರಮಾಣು ದಾಳಿಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಹೇಳುತ್ತದೆ, “ಯುದ್ಧವು ಶಾಂತಿಗೆ ಎರಡನೇ ಆಯ್ಕೆಯಾಗಿದೆ” ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. “ಇಸ್ರೇಲ್ ಇರಾನ್ ಮೇಲೆ ಪರಮಾಣು ದಾಳಿ ನಡೆಸಲಿದೆ! #ಇಸ್ರೇಲ್” ಎಂಬ ಬರಹವನ್ನು ವ್ಯಾಪವಾಗಿ ಹಂಚಿಕೊಳ್ಳಲಾಗುತ್ತಿರುವುದರಿಂದ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
https://twitter.com/Neeru_Devi1772/status/1936610743467577786
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜೂನ್ 16 ರಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವಿಡಿಯೋಗೆ ಹೋಲಿಕೆಯಾಗುವ ವಿಡಿಯೋವೊಂದು ಕಂಡು ಬಂದಿದೆ. ಪೋಸ್ಟ್ನಲ್ಲಿ “ಸ್ಟಾರ್ಶಿಪ್ 36 ಪರೀಕ್ಷಾ ಸಂಖ್ಯೆ 10 ಕ್ಕಿಂತ ಮೊದಲು ಉಡಾವಣಾ ಪ್ಯಾಡ್ಗೆ ಹೋಗುತ್ತಿದೆ” ಎಂದು ಉಲ್ಲೇಖಿಸಿಲಾಗಿದೆ. ಈ ಮೂಲಕ ಇದು ಇಸ್ರೇಲ್ ಇರಾನ್ ಸಂಘರ್ಷಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಖಚಿತವಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜೂನ್ 15 ರಂದು ಸ್ಪೇಸ್ಫ್ಲೈಟ್ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾದ ದೈತ್ಯ ಚಕ್ರಗಳ ಮೂಲಕ ಸ್ಟಾರ್ಶಿಪ್ 36 ಸಾಗಾಟ ಮಾಡುತ್ತಿರುವ ಲೈವ್ಸ್ಟ್ರೀಮ್ ಕಂಡುಬಂದಿದೆ. ಲೈವ್ಸ್ಟ್ರೀಮ್ನಲ್ಲಿರುವ ಸ್ಟಾರ್ಶಿಪ್ ವೈರಲ್ ವೀಡಿಯೊದಲ್ಲಿ ಕಂಡುಬರುವದಕ್ಕೆ ನಿಕಟವಾಗಿ ಹೊಂದಿಕೆಯಾಗುತ್ತಿದೆ.
ಜೂನ್ 16 ರಂದು ದಿ ಗಾರ್ಡಿಯನ್ ಪ್ರಕಟಿಸಿದ ವರದಿಯ ಪ್ರಕಾರ , ಟೆಕ್ಸಾಸ್ನ ಕ್ಯಾಮರೂನ್ ಕೌಂಟಿಯಲ್ಲಿರುವ ಸ್ಪೇಸ್ಎಕ್ಸ್ನ ಸ್ಟಾರ್ಬೇಸ್ ಸೌಲಭ್ಯದಲ್ಲಿ ಸ್ಥಿರ ಅಗ್ನಿಶಾಮಕ ಪರೀಕ್ಷೆಯ ಸಮಯದಲ್ಲಿ ಸ್ಟಾರ್ಶಿಪ್ 36 ‘ದುರಂತ ವೈಫಲ್ಯವನ್ನು ಅನುಭವಿಸಿತು ಮತ್ತು ಸ್ಫೋಟಗೊಂಡಿತು’. ಅದೇ ದಿನ, ಸ್ಪೇಸ್ಎಕ್ಸ್ನ ಹೊಸ ಸ್ಟಾರ್ಶಿಪ್ ವಾಹನ ‘ಹೊಗೆಯಲ್ಲಿ ಮುಳುಗಿತು’ ಎಂದು ಸ್ಪೇಸ್.ಕಾಮ್ ವರದಿ ಮಾಡಿದೆ. ಈ ಮೂಲಕ ವೈರಲ್ ವಿಡಿಯೋಗೂ ಇಸ್ರೇಲ್ ಇರಾನ್ ಸಂಘರ್ಷಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ವೈರಲ್ ವೀಡಿಯೊವು ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ಅನ್ನು ಎಂಜಿನ್ ಪರೀಕ್ಷೆಗಾಗಿ ಟೆಕ್ಸಾಸ್ನಲ್ಲಿರುವ ಸ್ಪೇಸ್ಎಕ್ಸ್ ಪರೀಕ್ಷಾ ತಾಣವಾದ ಮ್ಯಾಸೆಸ್ಗೆ ಸಾಗಿಸುವುದನ್ನು ತೋರಿಸುತ್ತದೆ. ಇದನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಇಸ್ರೇಲ್ ಇರಾನ್ ಮೇಲೆ ಅಣುಬಾಂಬ್ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸುಳ್ಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕು ನಂಬಬೇಡಿ ಮತ್ತು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇಸ್ರೇಲಿನ ಜನರು ಇರಾನ್ ಬಳಿ ಕ್ಷಮೆಯಾಚಿಸಿ, ಯುದ್ಧ ನಿಲ್ಲಿಸುವಂತೆ ತಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

