ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಭತ್ತು ತಿಂಗಳುಗಳಿಂದ ಸಿಲುಕಿಕೊಂಡಿದ್ದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬುಧವಾರ ಭೂಮಿಗೆ ಮರಳಿದ್ದಾರೆ. ಸುನಿತಾ ವಿಲಿಯಮ್ಸ್ ಅವರ ಜೊತೆಗೆ, ಅವರ ಸಹೋದ್ಯೋಗಿಗಳಾದ ಬುಚ್ ವಿಲೋರ್, ನಿಕ್ ಹ್ಯಾಗೆ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಸ್ಪೇಸ್ಎಕ್ಸ್ನ ಕ್ರೂ ಡ್ರಾಗನ್ ನೌಕೆಯಲ್ಲಿ ಮರಳಿದ್ದಾರೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ದೃಶ್ಯಗಳನ್ನು ಹಂಚಿಕೊಂಡಿರುವ ಹಲವರು ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿರುವ ದೃಶ್ಯ ಎಂದು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೂಡ ಸುನೀತಾ ವಿಲಿಯಮ್ಸ್ ಸೇರಿದಂತೆ ಇನ್ನು ಕೆಲವು ಗಗನಯಾತ್ರಿಗಳು ಕಂಡು ಬಂದಿರುವುದರಿಂದ, ಈ ದೃಶ್ಯವನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಬೋಯಿಂಗ್ ಸ್ಪೇಸ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ 07 ಜೂನ್ 2024ರಂದು ಮಾಡಲಾದ ಪೋಸ್ಟ್ವೊಂದು ಕಂಡು ಬಂದಿದ್ದು, ಇದರ ಪ್ರಕಾರ ಈ ವಿಡಿಯೋ ಸುನಿತಾ ವಿಲಿಯಮ್ಸ್ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ.
Hugs all around! The Expedition 71 crew greets Butch Wilmore and @Astro_Suni aboard @Space_Station after #Starliner docked at 1:34 p.m. ET on June 6. pic.twitter.com/wQZAYy2LGH
— Boeing Space (@BoeingSpace) June 6, 2024
ಈ ಪೋಸ್ಟ್ನ ಆಧಾರದ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 07 ಜೂನ್ 2024ರಂದು NDTV Profit ತನ್ನ ಯೂಟ್ಯೂಬ್ ಚಾನಲ್ನಲ್ಲಿ ಇದೇ ವೈರಲ್ ವಿಡಯೋವನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಇದಕ್ಕೆ “ISS ತಲುಪಿದ ನಂತರ NASA ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ವಿಜಯ ನೃತ್ಯ” ಎಂದು ಶೀರ್ಷಿಕೆ ನೀಡಿರುವುದು ಕಂಡು ಬಂದಿದ್ದು, ಈ ವರದಿಯ ಪ್ರಕಾರವೂ ವೈರಲ್ ವಿಡಿಯೋ ಸುನಿತಾ ವಿಲಿಯಮ್ಸ್ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶಕ್ಕೆ ತಲುಪಿದ್ದಕ್ಕೆ ಸಂಬಂಧಿಸಿದ್ದಕ್ಕಾಗಿದೆ ಎಂಬುದು ತಿಳಿದು ಬಂದಿದೆ.
ಇನ್ನು ಅದೇ 7 ಜೂನ್ 2024ರಂದು ANI ಕೂಡ ವರದಿಯನ್ನು ಮಾಡಿದ್ದು, . “ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಶುಕ್ರವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ನಾಸಾದ ದೃಶ್ಯಗಳು ಗುರುವಾರ ಮಧ್ಯಾಹ್ನ 3:46 ET ಕ್ಕೆ (ಶುಕ್ರವಾರ ಬೆಳಿಗ್ಗೆ IST) ಇಬ್ಬರು ನಾಸಾ ಗಗನಯಾತ್ರಿಗಳು ಯುಎಸ್ಎಸ್ ಹ್ಯಾಚ್ ಬಾಗಿಲಿನ ಮೂಲಕ ಪ್ರವೇಶಿಸುತ್ತಿರುವುದನ್ನು ತೋರಿಸಿದೆ. ಐಎಸ್ಎಸ್ನಲ್ಲಿರುವ ಎಕ್ಸ್ಪೆಡಿಶನ್ 71 ಸಿಬ್ಬಂದಿಯ ಏಳು ಗಗನಯಾತ್ರಿಗಳು ಬೋಯಿಂಗ್ ಹೊಸ ಕ್ಯಾನ್ಸುಲ್ನಲ್ಲಿ ಹಾರಿದ ಮೊದಲ ಗಗನಯಾತ್ರಿಗಳಾದ ಸುನೀತಾ ಮತ್ತು ಬುಚ್ ಅವರನ್ನು ಸ್ವಾಗತಿಸಿದರು” ಎಂದು ವರದಿ ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ವರದಿಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆ ತಂದಿರುವುದಕ್ಕೆ ಸಂಬಂದಿಸಿಲ್ಲ ಎಂಬುದು ಖಚಿತವಾಗಿದೆ ಮತ್ತು ಈ ವಿಡಿಯೋ 2024ರಲ್ಲಿ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ತೆರಳಿದ್ದಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಖಚಿತವಾಗಿದೆ. ಹೀಗಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್ ಮಾಡಲಾಗುತ್ತಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಭಾರತೀಯ ನೌಕಾಪಡೆಯು ಸಮುದ್ರದಲ್ಲಿ ಮುಳುಗಿದ್ದ 114 ವರ್ಷ ಹಳೆಯ ವಿಮಾನವನ್ನು ಪತ್ತೆ ಹಚ್ಚಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

