ಹರಿಯಾಣದ ಟ್ರಾವೆಲ್ ವ್ಲೋಗರ್ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್ ಪೊಲೀಸರು ಮೇ 17, 2025 ರಂದು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದರು. ವರದಿಗಳ ಪ್ರಕಾರ ಅವರು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್ಚಾಟ್ನಂತಹ ಎನ್ಕ್ರಿಪ್ಟ್ ಮಾಡಿದ ವೇದಿಕೆಗಳನ್ನು ಬಳಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಇರುವ ಫೋಟೋವೊಂದು ವೈರಲ್ ಆಗಿದೆ.

ಫೋಟೋದಲ್ಲಿ ಜ್ಯೋತಿ ಮಲ್ಹೋತ್ರಾ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ಜ್ಯೋತಿ ಮಲ್ಹೋತ್ರಾ ಅವರು ಸಮಾಜವಾದಿ ಪಕ್ಷ (ಎಸ್ಪಿ) ಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬರೆದುಕೊಂಡು ಹಲವರು ವೈರಲ್ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು, ಈ ವೇಳೆ ನಮಗೆ ಜನವರಿ 2017 ರಲ್ಲಿ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಜೊತೆ 2017 ರ ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿರುವ ಇದೇ ರೀತಿಯ ಫೋಟೋ ಕಂಡು ಬಂದಿದೆ. ಈ ಕುರಿತು ಹಲವು ಮಾಧ್ಯಮ ವರದಿಗಳು ಕೂಡ ಲಭ್ಯವಾಗಿವೆ

ಮಾಧ್ಯಮ ವರದಿಗಳಲ್ಲಿ ಕಾಣಿಸಿಕೊಂಡಿರುವ ಎಸ್ಪಿ ನಾಯಕನ ಫೋಟೋದೊಂದಿಗೆ ವೈರಲ್ ಫೋಟೋವನ್ನು ಹೋಲಿಸಿದಾಗ, ಮೂಲ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. . ಡಿಂಪಲ್ ಯಾದವ್ ಅವರ ಮುಖವನ್ನು ಜ್ಯೋತಿ ಮಲ್ಹೋತ್ರಾ ಅವರ ಮುಖದೊಂದಿಗೆ ಬದಲಾಯಿಸಲಾಗಿದ್ದು, ಪಾಕಿಸ್ತಾನಿ ಗೂಢಚಾರ ಜ್ಯೋತಿ ಮಲ್ಹೋತ್ರಾ ಅವರನ್ನು ಅಖಿಲೇಶ್ ಯಾದವ್ ಜೊತೆಗೆ ಇರುವಂತೆ ಎಡಿಟ್ ಮಾಡಿರುವುದು ದೃಢಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾ ಅವರೊಂದಿಗೆ ಅಖಿಲೇಶ್ ಯಾದವ್ ಅವರು ಇರುವ ಫೋಟೋ ಎಡಿಟ್ ಮಾಡಲಾಗಿದೆ. ಹೀಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

