ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಾಲಿವುಡ್ ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರನೌತ್ ಪರಸ್ಪರ ಅಪ್ಪಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ಇದು ನಿಜವೆಂದು ಹೇಳಿಕೊಳ್ಳುತ್ತಾರೆ. ಈ ವಿಡಿಯೋ ನೋಡಿದ ಹಲವು ಮಂದಿ ವಿವಿಧ ಬಗೆಯ ಬರಹಗಳನ್ನು ಬರೆದು ಹಂಚಿಕೊಳ್ಳುತ್ತಿದ್ದು, ಇನ್ನೂ ಕೆಲವರು ಅಶ್ಲೀಲವಾಗಿ ಕೂಡ ವಿಡಿಯೋ ಬಗ್ಗೆ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕೂಡ ಬಿಜೆಪಿ ನಾಯಕಿ ಮತ್ತು ಸಂಸದೆ ಕಂಗನಾ ರಾನೌತ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಸ್ಪರ ಅಪ್ಪಿಕೊಳ್ಳುವುದನ್ನು ಕಾಣಬಹುದಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಸತ್ಯವೆಂದು ಭಾವಿಸಿ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಈ ಬಗ್ಗೆ ಆಕ್ಷೇಪವನ್ನೂ ಎತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೀಡಿಯೊ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, X ನಲ್ಲಿ ವೈರಲ್ ಪೋಸ್ಟ್ಗೆ ಹೋಲುವ ಚಿತ್ರವನ್ನು ಒಳಗೊಂಡ ಪೋಸ್ಟ್ ಒಂದು ಕಂಡು ಬಂದಿದೆ. ಮೂಲ ಚಿತ್ರವು ಅಕ್ಟೋಬರ್ 1, 2021 ರಂದು ಕಂಗನಾ ರನೌತ್ ಅವರು ಲಕ್ನೋದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ ತೆಗೆದ ಚಿತ್ರವಾಗಿದೆ ಎಂಬುದು ತಿಳಿದು ಬಂದಿದೆ.
मुख्यमंत्री श्री @myogiadityanath जी महाराज से आज लखनऊ स्थित उनके सरकारी आवास पर प्रसिद्ध फिल्म अभिनेत्री कंगना रनौत जी ने शिष्टाचार भेंट की। pic.twitter.com/0BmTbGVDaW
— Yogi Adityanath Office (@myogioffice) October 1, 2021
ಭೇಟಿಯ ಸಮಯದಲ್ಲಿ ಅವರ ಸಂವಾದದ ವೀಡಿಯೊ ಕೂಡ ಕಂಡು ಬಂದಿದೆ. . ಕ್ಲಿಪ್ ಪ್ರಕಾರ, ಯೋಗಿ ಆದಿತ್ಯನಾಥ್ ಅವರು ಕಂಗನಾ ಅವರನ್ನು ‘ಒನ್ ಡಿಸ್ಟ್ರಿಕ್ಟ್-ಒನ್ ಪ್ರಾಡಕ್ಟ್’ (ODOP) ಕಾರ್ಯಕ್ರಮದ ಬ್ರಾಂಡ್ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದರು. ಆದರೆ ದೃಶ್ಯಗಳಲ್ಲಿ ಯಾವುದೇ ಹಂತದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕಂಗನಾ ರನೌತ್ ಅವರು ಅಪ್ಪಿಕೊಂಡು ಮಾತನಾಡಿಸಿರುವುದು ಕಂಡು ಬಂದಿಲ್ಲ. ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ‘ಮಿನಿಮ್ಯಾಕ್ಸ್’ ಮತ್ತು ‘ ಹೈಲುವೊ ಎಐ ‘ ನೊಂದಿಗೆ ವಾಟರ್ಮಾರ್ಕ್ ಕಂಡುಬಂದಿದೆ. ಹೈಲುವೊ ಎಐ ಎಂಬುದು ಮಿನಿಮ್ಯಾಕ್ಸ್ ಒಡೆತನದ ವೀಡಿಯೊ ಉತ್ಪಾದನಾ ಸಾಧನವಾಗಿದ್ದು, ಇದು ಬಳಕೆದಾರರಿಗೆ ಪಠ್ಯ ಮತ್ತು ಚಿತ್ರಗಳನ್ನು ಬಳಸಿಕೊಂಡು AI- ರಚಿತ ವೀಡಿಯೊಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಹಾಗಾಗಿ ವೈರಲ್ ವಿಡಿಯೋವನ್ನು AI ನಿಂದ ನಿರ್ಮಿಸಿರುವುದು ಖಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಾಲಿವುಡ್ ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರನೌತ್ ಪರಸ್ಪರ ಅಪ್ಪಿಕೊಂಡಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋವನ್ನು AI ಬಳಸಿ ನಿಮಿಸಲಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ‘ಗೋ ಬ್ಯಾಕ್ ಗ್ರೋಕ್’ ಎಂದು ಪೋಸ್ಟರ್ ಹಿಡಿದಿರುವ ಚಿತ್ರ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

