ಯುಪಟೋರಮ್ ಪರ್ಫೊಯಮ್(EUPATORUM PERFOIAM-200) ಎಂಬ ಔಷಧಿಯು 48 ಗಂಟೆಗಳಲ್ಲಿ ಡೆಂಗ್ಯೂವನ್ನು ಗುಣಪಡಿಸುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
“48 ಗಂಟೆಗಳಲ್ಲಿ ಡೆಂಗ್ಯೂ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವ ಔಷಧಿ. ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಜನರಿಗೆ ಕಳುಹಿಸಿ: ಯಾರಿಗಾದರೂ ಡೆಂಗ್ಯೂ ಅಥವಾ ಸಾಮಾನ್ಯ ಜ್ವರದಿಂದಾಗಿ ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆಯಾಗಿದ್ದರೆ, ನಂತರ ಹೋಮಿಯೋಪತಿ ಔಷಧವಿದೆ. EUPATORUM PERFOIAM 200 ಎಂಭ ಸಿರಪ್ ಹೋಮಿಯೋಪತಿ ಔಷಧ. ಪ್ರತಿ 2-2 ಗಂಟೆಗಳಿಗೊಮ್ಮೆ ಸಾಮಾನ್ಯ ನೀರಿನಲ್ಲಿ 3 ಅಥವಾ 4 ಹನಿಗಳನ್ನು ಸೇರಿಸಿ 2 ದಿನಗಳವರೆಗೆ ಮಾತ್ರ ಕುಡಿಯಿರಿ. ನೀವು ಪುಣ್ಯವನ್ನು ಗಳಿಸಲು ಬಯಸಿದರೆ ಈ ಸಂದೇಶವನ್ನು ಧಾರ್ಮಿಕ ಪ್ರಸಾದವಾಗಿ ಸ್ವೀಕರಿಸಿ ಎಲ್ಲರರೊಂದಿಗೆ ಹಂಚಿಕೊಳ್ಳಿ ಎಂದು ಮೋಹಿತ್ ಪ್ರಜಾಪತಿ ಫೇಸ್ಬುಕ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್
ಕನ್ನಡ ಫ್ಯಾಕ್ಟ್ ಚೆಕ್ ತಂಡವು ಈ ವೈರಲ್ ಸಂದೇಶದ ಬಗ್ಗೆ ತನಿಖೆ ಮಾಡಿದ್ದು, ಇದು ತಪ್ಪುದಾರಿಗೆಳೆಯುವ ಸಂದೇಶ ಎಂಬುದನ್ನು ಕಂಡು ಹಿಡಿದಿದೆ. ಆರೋಗ್ಯ ತಜ್ಞರ ಪ್ರಕಾರ, “ರೋಗದ ಲಕ್ಷಣಗಳು ಮತ್ತು ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರಕಾರ ಔಷಧವನ್ನು ತೆಗೆದುಕೊಳ್ಳಬೇಕು. ಒಂದು ಔಷಧಿಯು ಎಲ್ಲ ವ್ಯಕ್ತಿಗಳ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ.”
ಈ ಔಷಧದ ಬಗ್ಗೆ ದೆಹಲಿಯ ರಾಮಾನುಜಂ ಹೋಮಿಯೋಪತಿಕ್ ಸೆಂಟರ್ನ ಡಾ.ಶಾಲಿನಿ ಶಾಕ್ಯಾರವರು ಪ್ರತಿಕ್ರಿಯಿಸಿದ್ದು, “ಯಾವುದೇ ಕಾಯಿಲೆಯ ಚಿಕಿತ್ಸೆಯು ಅದರ ತೀವ್ರತೆಯ ಮೇಲೆ ಅವಲಂಬಿಸಿರುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ಡೆಂಗ್ಯೂ ರೋಗದ ಸ್ವರೂಪ ಮತ್ತು ಅದರ ಪರಿಣಾಮವನ್ನು ಮಾತ್ರ ಗುರುತಿಸಬಹುದು. ಈ ಔಷಧಿ 48 ಗಂಟೆಗಳಲ್ಲಿ ಡೆಂಗ್ಯೂ ರೋಗವನ್ನು ಗುಣಪಡಿಸುತ್ತದೆ ಎಂದು ಹೇಳಲಾಗುವುದಿಲ್ಲ. ವೈರಲ್ ಪೋಸ್ಟ್ನಲ್ಲಿ ಔಷಧದ ಹೆಸರನ್ನೂ ಕೂಡ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಸರಿಯಾದ ಹೆಸರು ʼಯುಪಟೋರಿಯಮ್ ಪರ್ಫೋಲಿಯೇಟಮ್ʼ ಆಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಲಕ್ನೋದ ಸರ್ಕಾರಿ ರಾಷ್ಟ್ರೀಯ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರೊಫೆಸರ್ ಡಾ.ದಿಲೀಪ್ ಕುಮಾರ್ ಸೋಂಕರ್ರವರು ಹೇಳಿಕೆ ನೀಡಿದ್ದು, “ಯುಪಟೋರಿಯಮ್ ಪರ್ಫೋಲಿಯೇಟಮ್ 200 ಎಂಬುದು ಸಸ್ಯ ಆಧಾರಿತ ಔಷಧವಾಗಿದ್ದು, ಎಲುಬು ನೋವನ್ನು ಉಂಟುಮಾಡುವ ಜ್ವರವನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಡೆಂಗ್ಯೂ ಮುಂತಾದ ಕಾಯಿಲೆಗಳಲ್ಲಿಯೂ ಬಳಸಲಾಗುತ್ತದೆ. ಆದರೆ ಈ ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು. ರೋಗದ ಲಕ್ಷಣಗಳು ಮತ್ತು ತೀವ್ರತೆಯು ರೋಗಿಯಿಂದ ರೋಗಿಗೆ ವಿಭಿನ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲರನ್ನೂ ಒಂದೇ ರೀತಿಯಾಗಿ ಪರಿಗಣಿಸಲಾಗುವುದಿಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧವನ್ನು ಬಳಸುವುದು ಹಾನಿಕಾರಕವಾಗಿದೆ” ಎಂದು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಔಷಧಿ 48 ಗಂಟೆಗಳಲ್ಲಿ ಡೆಂಗ್ಯೂ ರೋಗವನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು. ವೈರಲ್ ಪೋಸ್ಟ್ನಲ್ಲಿ ಔಷಧದ ಹೆಸರನ್ನೂ ಕೂಡ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ವೈದ್ಯರ ಸೂಚನೆ ಇಲ್ಲದೇ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.
ಕನ್ನಡ ಫ್ಯಾಕ್ಟ್ಚೆಕ್ ತಂಡವು ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಫ್ಯಾಕ್ಟ್ಚೆಕ್ ಮಾಡಿದ್ದು ಇವುಗಳನ್ನು ಇಲ್ಲಿ ಓದಬಹುದು.
Fact Check | ಪಪ್ಪಾಯಿ ಎಲೆಯ ರಸವು ಡೆಂಗ್ಯು ಖಾಯಿಲೆ ಗುಣ ಪಡಿಸುತ್ತದೆ ಎಂಬುದು ಸುಳ್ಳು
Fact Check | ಕ್ಯಾರಿಪಿಲ್ ಮಾತ್ರೆ ಡೆಂಗ್ಯೂ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

