Fact Check | ಕ್ಯಾರಿಪಿಲ್ ಮಾತ್ರೆ ಡೆಂಗ್ಯೂ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು

ರಾಜ್ಯದಲ್ಲಿ ಇತ್ತೀಚೆಗೆ ಮಳೆ ಹೆಚ್ಚಾಗುತ್ತಿದ್ದಂತೆ ಡೆಂಗ್ಯು ಸೋಂಕು ಕೂಡ ಎಲ್ಲಡೆ ಹಬ್ಬಲು ಪ್ರಾರಂಭವಾಗಿದೆ. ಇದರ ಮಧ್ಯೆ ” ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ, ಈಗಲೆ ಖರೀದಿಸಿ, ಪಪ್ಪಾಯ ಎಲೆಯ ಸಾರವನ್ನು ಒಳಗೊಂಡಿರುವ ‘ಕ್ಯಾರಿಪಿಲ್‌’ ಮಾತ್ರೆಯು ಡೆಂಗ್ಯುವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವ ಶಕ್ತಿ ಹೊಂದಿದೆ. ‘ಅಂತಃಕರಣ’ ಇದನ್ನು ಉಚಿತವಾಗಿ ನೀಡುತ್ತಿದೆ. ಈ ಸಂದೇಶವನ್ನು ಯಾವುದೇ ಕಾರಣಕ್ಕೂ ಅಳಿಸಬೇಡಿ ಎಲ್ಲರಿಗೂ ತಲುಪುವವರೆಗೂ ಶೇರ್‌ ಮಾಡಿ”ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಓದಿದ ಹಲವು ಮಂದಿ ಪಪಾಯಿ ಸಾರವನ್ನು ಹೊಂದಿರುವ ಕ್ಯಾರಿಪಿಲ್‌ ನಿಜಕ್ಕೂ ಡೆಂಗ್ಯೂ ಖಾಯಿಲೆಯಿಂದ ತಮ್ಮನ್ನು ಮುಕ್ತಗೊಳಿಸುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ ಕೆಲವರು ಯಾವುದೇ ವೈದ್ಯರ ಸಲಹೆಯನ್ನು ಪಡೆಯದೆ ಈ ಕ್ಯಾರಿಪಿಲ್‌ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗುತ್ತದೆ. ಹೀಗೆ ವಾಟ್ಸ್‌ಆಪ್‌ ಸೇರಿದ ಹಾಗೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಕ್ಯಾರಿಪಿಲ್‌ ನಿಜಕ್ಕೂ ಡೆಂಗ್ಯವನ್ನು ನಿವಾರಣೆ ಮಾಡುತ್ತದೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಮಾತ್ರೆಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 12 ಆಗಸ್ಟ್‌ 2016ರಂದು ದ ಹೆಲ್ತ್‌ ಸೈಟ್‌.ಕಾಮ್ ಎಂಬ ವೆಬ್‌ಸೈಟ್‌ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ‌ಈ ಸಂಸ್ಥೆಯು ಜಾಹಿರಾತಿನಲ್ಲಿ ನೀಡಲಾದ ನಂಬರ್‌ಗೆ ಕರೆ ಮಾಡಿ ವಿಚಾರಣೆ ನಡೆಸಿದಾಗ ಈ ಮಾತ್ರಗೂ ಅಂತಃಕರಣ ಕ್ಲಿನಿಕ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತ ಪಡಿಸಿಕೊಂಡಿದೆ.

ಬಳಿಕ ಈ ಕ್ಯಾರಿಪಿಲ್ ಮಾತ್ರೆಯನ್ನು  ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಎಂಬ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ತಯಾರಿಸಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಾತ್ರೆಗಳು ಸಸ್ಯಶಾಸ್ತ್ರೀಯಕ್ಕೆ ಸಂಬಂಧಪಟ್ಟಿದೆ  ಎಂಬುದನ್ನು ಖಚಿತ ಪಡಿಸಿಕೊಂಡ ಈ ತಂಡ, ಬಳಿಕ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ನ ವೈದ್ಯಕೀಯ ವ್ಯವಹಾರಗಳ ವಿಪಿ ಡಾ ಮಂಜುಳಾ ಸುರೇಶ್  ಅವರನ್ನು ಸಂಪರ್ಕಿಸಿ ಮಾತನಾಡಿದೆ. ಇದಕ್ಕೆ ಅವರು  “ಈ ಸಂದೇಶವನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡುವ ಬಗ್ಗೆ ನಮಗೆ ತಿಳಿದಿಲ್ಲ. ಕ್ಯಾರಿಪಿಲ್ ಒಂದು ಪ್ರಿಸ್ಕ್ರಿಪ್ಷನ್ ಔಷಧವಾಗಿದೆ ಮತ್ತು ನಾವು ಅದನ್ನು ವೈದ್ಯರಿಗೆ ಮಾತ್ರ ಮಾರಾಟ ಮಾಡುತ್ತೇವೆ. ಡೆಂಗ್ಯೂವನ್ನು 48 ಗಂಟೆಗಳಲ್ಲಿ ಗುಣಪಡಿಸಬಹುದು ಎಂದು ನಾವು ಹೇಳುವುದಿಲ್ಲ. ವಾಸ್ತವವಾಗಿ, ಔಷಧವನ್ನು ಐದು ದಿನಗಳವರೆಗೆ ತೆಗೆದುಕೊಳ್ಳಬೇಕು.” ಎಂದು ದ ಹೆಲ್ತ್‌ ಸೈಟ್‌.ಕಾಮ್‌ಗೆ ಸ್ಪಷ್ಟ ಪಡಿಸಿದೆ

ಒಟ್ಟಾರೆಯಾಗಿ ಹೇಳುವುದಾದರೆ ಕ್ಯಾರಿಪಿಲ್‌ ಮಾತ್ರೆಯಿಂದ ಡೆಂಗ್ಯು ಸೋಂಕಿನಿಂದ ಕೇವಲ 48 ಗಂಟೆಗಳಲ್ಲಿ ಮುಕ್ತಿ ಪಡೆಯಬಹುದು ಎಂಬ ಪ್ರತಿಪಾದನೆ ಸುಳ್ಳಾಗಿದೆ. ಹಾಗೂ ಈ ಸಂದೇಶ 2016ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವುದರಿಂದ ಇದು ಹಳೆಯ ಸುಳ್ಳು ಸುದ್ದಿಯಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ.

ವಿಶೇಷ ಸೂಚನೆ

ಪ್ರಿಯ ಓದುಗರೆ ಇತ್ತೀಚೆಗಿನ ದಿನಗಳಲ್ಲಿ ರಾಜ್ಯದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಯಾವುದೇ ಮಾತ್ರಗಳನ್ನೋ ಅಥವಾ ಔಷಧಿಗಳನ್ನೋ ತೆಗೆದುಕೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯರನ್ನು ಒಮ್ಮೆ ಭೇಟಿಯಾಗಿ ಅವರ ಸಲಹೆಯನ್ನು ಪಡೆಯಿರಿ. ವೈದ್ಯರ ಸೂಚನೆ ಇಲ್ಲದೆ ಸೇವಿಸುವ ಔಷಧಿಗಳು ಜೀವಕ್ಕೆ ಅಪಾಯ ಕೂಡ ಉಂಟಾಗಬಹುದು ಹಾಗಾಗಿ ಎಚ್ಚರ ವಹಿಸಿ. ಮತ್ತು ನಿಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡುವ  ಮೂಲಕ ಮತ್ತು ನೀರು ನಿಲ್ಲದಿರುವ ಹಾಗೆ ನೋಡಿಕೊಳ್ಳುವ ಮೂಲಕ ಡೆಂಗ್ಯು ಬರದಂತೆ ತಡೆಯಬಹುದಾಗಿದೆ.


ಇದನ್ನೂ ಓದಿ : Fact Check: ತಾಮ್ರದ ಕಡಗ ಅಥವಾ ರಕ್ಷಾಸೂತ್ರ ಕಟ್ಟಿಕೊಳ್ಳುವ ಮೂಲಕ ಪಾರ್ಶ್ವವಾಯು ತಡೆಯಬಹುದು ಎಂಬುದಕ್ಕೆ ಸಾಕ್ಷಿಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *