ಭಾರತದ ಪ್ರಯಾಗ್ರಾಜ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕುಂಭಮೇಳದ ಛಾಯಾಚಿತ್ರವನ್ನು ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ತೆಗೆದಿದ್ದಾರೆ ಎಂದು ಹೇಳಿಕೊಂಡು ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಸುನೀತ ವಿಲಿಯಮ್ಸ್ ಅವರು ನಿಜವಾದ ಹಿಂದೂ, ಅವರ ಶ್ರದ್ಧಾ ಭಕ್ತಿಯನ್ನು ನಾವೆಲ್ಲರೂ ಮೆಚ್ಚಕೊಳ್ಳಲೇ ಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ.

ವೈರಲ್ ಫೋಟೋ ಕೂಡ ಬಾಹ್ಯಾಕಾಶದಿಂದ ತೆಗೆದಿರುವ ಹಾಗೆ ಇರುವುದರಿಂದ ಕೆಲವರು “ಸುನೀತಾ ವಿಲಿಯಮ್ಸ್ ಅವರ ಸೋದರಸಂಬಂಧಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸುನೀತಾ ತಂಗಿದ್ದಾಗ ನಾಸಾ ಗಗನಯಾತ್ರಿ ಸೆರೆಹಿಡಿದ ವೈಭವದ ಕ್ಷಣವನ್ನು ಹಂಚಿಕೊಂಡಿದ್ದಾರೆ. ISS ಭಾರತದ ಮೇಲೆ ಹಾರುತ್ತಿದ್ದಾಗ, ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಹಾ ಕುಂಭಮೇಳವನ್ನು ಸೆರೆಹಿಡಿದರು” ಎಂದು ಬರೆದುಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಫೋಟೋಗೆ ಸಂಬಂಧಿಸಿದಂತೆ ಹಿಂದೂಸ್ತಾನ್ ಟೈಮ್ಸ್ ನ ವರದಿಯೊಂದು ಕಂಡು ಬಂದಿದೆ. ಅದರಲ್ಲಿ “ಪ್ರಯಾಗರಾಜ್ ನಲ್ಲಿ 2025 ರ ಮಹಾ ಕುಂಭಮೇಳಕ್ಕಾಗಿ ಬೃಹತ್ ಮೂಲಸೌಕರ್ಯ ಕಾರ್ಯವನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ISRO ಬಿಡುಗಡೆ ಮಾಡಿದೆ” ಎಂಬ ಮಾಹಿತಿಯನ್ನು ನೀಡಿಲಾಗಿದೆ.

ಇಂಡಿಯನ್ ಎಕ್ಸ್ಪ್ರೆಸ್ ಕೂಡ ಅದೇ ಚಿತ್ರವನ್ನು ತನ್ನ ವರದಿಯಲ್ಲಿ ಪ್ರಕಟಿಸಿ, “ಮೂರು ಸಮಯ-ಸರಣಿಯ ಚಿತ್ರಗಳು ಪ್ರಯಾಗ್ರಾಜ್ ಸಂಗಮ ಮತ್ತು ಗಂಗಾ ನದಿಯ ಜೂಮ್ ಮಾಡಿದ ಭಾಗವನ್ನು ಸೆರೆಹಿಡಿದಿವೆ, ಇದು ತಾತ್ಕಾಲಿಕ ಪಾಂಟೂನ್ ಸೇತುವೆಗಳನ್ನು ತೋರಿಸುತ್ತದೆ” ಎಂದು ಹೇಳಿದೆ. ಈ ಚಿತ್ರವನ್ನು ಸುನೀತಾ ವಿಲಿಯಮ್ಸ್ ತೆಗೆದಿಲ್ಲ, ಇಸ್ರೋ ಅಧಿಕೃತವಾಗಿ ಬಿಡುಗಡೆ ಮಾಡಿದೆ ಎಂದು ಈ ಮೂಲಕ ಖಚಿತವಾಗಿದೆ.

ಮತ್ತಷ್ಟು ಹುಡುಕಿದಾಗ, ರಾಷ್ಟ್ರೀಯ ದೂರಸಂವೇದಿ ಕೇಂದ್ರ (NRSC) ಬಿಡುಗಡೆ ಮಾಡಿದ ಮೂಲ ದಾಖಲೆಯು ಅದೇ ಚಿತ್ರವನ್ನು ಒಳಗೊಂಡಿತ್ತು. ಇದು ಚಿತ್ರವನ್ನು ಬಾಹ್ಯಾಕಾಶದಿಂದ ಗಗನಯಾತ್ರಿಯೊಬ್ಬರು ಸೆರೆಹಿಡಿದಿಲ್ಲ, ಬದಲಾಗಿ ಭಾರತೀಯ ಉಪಗ್ರಹ ಸೆರೆಹಿಡಿದಿದೆ ಎಂಬುದನ್ನು ಮತ್ತೊಮ್ಮೆ ನಮಗೆ ಖಚಿತ ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ಪ್ರಯಾಗ್ರಾಜ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕುಂಭಮೇಳದ ಛಾಯಾಚಿತ್ರವನ್ನು ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ತೆಗೆದಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದಾರೆ ಎಂದು ನಾಟಕೀಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

